October 30, 2024

MALNAD TV

HEART OF COFFEE CITY

ಬೆಟ್ಟದ ತುದಿಯಲ್ಲಿ ರೀಲ್ಸ್ ಮಾಡಿದ್ರೆ ಹುಷಾರ್…‌ ದೇವೀರಮ್ಮನ ಭಕ್ತರಿಗೆ ಖಾಕಿ ಖಡಕ್ ಎಚ್ಚರಿಕೆ

1 min read

 

ಚಿಕ್ಕಮಗಳೂರು.ಸಮುದ್ರ ಮಟ್ಟದಿಂದ ಸುಮಾರು 3 ಸಾವಿರ ಅಡಿ ಎತ್ತರದ ಪಿರಮಿಡ್ ಆಕಾರದ ಬೆಟ್ಡದ ತುದಿಯಲ್ಲಿ ನೆಲೆ‌ ನಿಂತು ವರ್ಷಕ್ಕೊಮ್ಮೆ ದರ್ಶನ ನೀಡೋ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬಿಂಡಿಗ ದೇವೀರಮ್ಮನ ಭಕ್ತರಿಗೆ ಖಾಕಿ ಪಡೆ ಕಠಿಣ ಸಂದೇಶ ರವಾನಿಸಿದೆ. ಮಳೆ ಬಂದು ಬೆಟ್ಟ ಜಾರುತ್ತಿದೆ. ಬೆಟ್ಟ ಹತ್ತುವಾಗ ಮಾರ್ಗ ಮಧ್ಯೆ ಸೆಲ್ಫಿ ತೆಗೆದುಕೊಳ್ಳುವುದು, ರೀಲ್ಸ್ ಮಾಡುವುದು, ಫೋಟೋ ಸೆಷನ್ ಮಾಡುವುದು ಕಂಡು ಬಂದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಅಮಟೆ ಎಚ್ಚರಿಕೆ ನೀಡಿದ್ದಾರೆ. ನಾಳೆ ಬುಧವಾರ ಸಂಜೆ 4 ಗಂಟೆಯಿಂದ ಗುರುವಾರ ಸಂಜೆವರೆಗೂ ಬೆಟ್ಟ ಹತ್ತಿ ದೇವೀರಮ್ಮನ ದರ್ಶನಕ್ಕೆ ದೇವಾಲಯ ಆಡಳಿತ ಮಂಡಳಿ ಅವಕಾಶ ಕಲ್ಪಿಸಿದೆ. ಹಾಗಾಗಿ, ಸುಮಾರು 1 ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತುವ ಸಾಧ್ಯತೆ ಇದ್ದು ಜಿಲ್ಲಾಡಳಿತ ಸರ್ವ ಸಕಲ‌ ಸಿದ್ಧತೆ ಮಾಡಿಕೊಂಡಿದೆ. ಆದರೆ, ಬೆಟ್ಡ ಹತ್ತುವ ಮಾರ್ಗದಲ್ಲಿ ಡ್ಯಾನ್ಸ್ ಮಾಡುವುದು, ಫೋಟೋ ಸೆಷನ್ ಮಾಡುವುದು, ಸೆಲ್ಫಿಗಾಗಿ ಭಕ್ತರಿಗೆ ತೊಂದರೆ ಕೊಡುವುದು, ರೀಲ್ಸ್ ಮಾಡುವುದು ಕಂಡು ಬಂದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

*ಬೆಟ್ಟ ಹತ್ತುವ ಮಾರ್ಗ :* ಸುಮಾರು 3 ಸಾವಿರ ಅಡಿ‌ ಎತ್ತರದ ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆ ನಿಂತಿರೋ ದೇವೀರಮ್ಮನ ನೋಡಲು ಲಕ್ಷಕ್ಕೂ ಅಧಿಕ ಭಕ್ತರು ಬರುವ ಹಿನ್ನೆಲೆ ಪೊಲೀಸರ ಬೆಟ್ಟ ಹತ್ತುವ ಮಾರ್ಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದಾರೆ. ಮಲ್ಲೇನಹಳ್ಳಿ ಮಾರ್ಗ, ಮಾಣಿಕ್ಯಾಧಾರ ಮಾರ್ಗ, ಅರಿಶಿನಗುಪ್ಪೆ ಹಾಗೂ ಕಾಫಿ ತೋಟದ ಒಳಗಿಂದ ಒಟ್ಟು ನಾಲ್ಕು ಮಾರ್ಗದಲ್ಲಿ ಹತ್ತುವ ಬೆಟ್ಟಕ್ಕೆ ನಾಲ್ಕು ಮಾರ್ಗದಲ್ಲೂ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದಾರೆ. ಸುಮಾರು 3 ಕಿ.ಮೀ. ಎತ್ತದ ಬೆಟ್ಟದಲ್ಲಿ ಪ್ರತಿ 1 ಕಿ.ಮೀ.ಗೆ ಒಂದು ಪೊಲೀಸರ ತಂಡವನ್ನ ನಿಯೋಜನೆ ಮಾಡಲಾಗಿದೆ. ಬೆಟ್ಟದ ಮಾರ್ಗದ 5 ಕಡೆ ಮೆಗಾಫೋನ್ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸಲಿದ್ದಾರೆ.‌ ಮಾರ್ಗದುದ್ದಕ್ಕೂ ಅಲ್ಲಲ್ಲೇ, ಪೊಲೀಸ್, ಆರೋಗ್ಯ ಸಿಬ್ಬಂದಿ, ಅಗ್ನಿಶಾಮಕ, ಸ್ವಯಂಸೇವಕರು ಭಕ್ತರ ಅನುಕೂಲಕ್ಕೆ ಸಿದ್ಧರಿರ್ತಾರೆ. ಬೆಟ್ಟ ಹತ್ತಲು ಸುಸ್ತಾದರೆ ರೋಪ್ (ಹಗ್ಗ) ಹಿಡಿದು ಹತ್ತೋದಕ್ಕೂ ಸ್ವಯಂ ಸೇವಕರು, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗಳು ನೆರವಿಗೆ ಬರಲಿದ್ದಾರೆ.

*ಹೆಚ್ಚಿನ ಬಸ್ ಸೌಲಭ್ಯ :* ಮೂರು ದಿನಗಳ ಕಾಲ ದೇವೀರಮ್ಮನ ದೀಪೋತ್ಸವ ಕಾರ್ಯಕ್ರಮ ನಡೆಯುವುದರಿಂದ ಚಿಕ್ಕಮಗಳೂರು ನಗರದಿಂದ ನಿತ್ಯ ಸಂಚರಿಸುವ ಬಸ್ ಗಳ ಜೊತೆ ಮೂರು ದಿನಗಳ ಕಾಲ ನಿತ್ಯ 50 ಬಸ್ ಗಳನ್ನ ಹೆಚ್ಚುವರಿಯಾಗಿ ಬಿಟ್ಡಿದ್ದಾರೆ. ಜಿಲ್ಲಾಡಳಿತ ಹಾಗೂ ದೇವಾಲಯ ಆಡಳಿತ ಮಂಡಳಿ ಭಕ್ತರು ಸಾಧ್ಯವಾದಷ್ಟು ಬಸ್ಸಿನಲ್ಲಿ ಬಂದು ಹೋಗಿ, ತಮ್ಮ-ತಮ್ಮ ವಾಹನಗಳಲ್ಲಿ ಬಂದರೆ ಟ್ರಾಫಿಕ್ ಜಾಮ್ ಆಗಿ ತೊಂದರೆಯಾಗುವ ಸಂಭವವಿದೆ. ಹಾಗಾಗಿ, ಭಕ್ತರು ಬಸ್ಸಿನಲ್ಲೇ ಬಂದು ಹೋಗಿ ಎಂದು ಮನವಿ ಮಾಡಿದ್ದಾರೆ‌. ಮಾಣಿಕ್ಯಾಧಾರದ ಮಾರ್ಗವಾಗಿ ಹತ್ತುವ ಭಕ್ತರಿಗೆ ದತ್ತಪೀಠದಲ್ಲಿ ಪಾರ್ಕಿಂಗ್ ಸಮಸ್ಯೆ ಇರುವುದರಿಂದ ಕೇವಲ 150 ಗಾಡಿಗಳಿಗೆ ಮಾತ್ರ ಅವಕಾಶ ನೀಡಲಿದ್ದಾರೆ.

*2 ದಿನ ಮದ್ಯ ಮಾರಾಟ ಫುಲ್ ಬಂದ್ :* ಬೆಟ್ಟದ ತಾಯಿ ದೇವೀರಮ್ಮನ ದೀಪೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಯುವುದರಿಂದ ಇದೇ ಅಕ್ಟೋಬರ್ 30ರ ಬುಧವಾರ ಹಾಗೂ 31ರ ಗುರುವಾರದಂದು ದೇವೀರಮ್ಮನ ದೇವಾಲಯವಿರುವ ಮಲ್ಲೇನಹಳ್ಳಿ ಗ್ರಾಮದ 10 ಕಿ.ಮೀ. ಸುತ್ತಳತೆಯಲ್ಲಿ ಮದ್ಯ ಮಾರಾಟಕ್ಕೆ ಜಿಲ್ಲಾಡಳಿತ ಫುಲ್ ಬ್ರೇಕ್ ಹಾಕಿದೆ. ಮದ್ಯ ಮಾರುವುದು, ಶೇಖರಿಸಿಟ್ಟು ಮಾರುವುದು, ಅಂಗಡಿ-ಮನೆಗಳಲ್ಲಿ ಮಾರಾಟ ಮಾಡಿದ್ರೆ ಸೂಕ್ತ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇನ್ನು ಅಗ್ನಿಶಾಮಕ ಸಿಬ್ಬಂದಿಗಳು ಕೂಡ ಬೆಟ್ಟದಲ್ಲಿ ರೋಪ್ ನೊಂದಿಗೆ ಭಕ್ತರ ಬೆನ್ನಿಗೆ ಬಂದೋಬಸ್ತ್ ಕಲ್ಪಿಸಿದ್ದಾರೆ. ಎರಡು ಅಗ್ನಿಶಾಮಕ ಗಾಡಿಗಳು ಕೂಡ ಸ್ಥಳದಲ್ಲಿ ಮೊಕ್ಕಾಂ ಹೂಡಿರುತ್ತವೆ.

*ಮಲ್ಲೇನಹಳ್ಳಿಯಲ್ಲಿ ತಾತ್ಕಾಲಿಕ ಆಸ್ಪತ್ರೆ, ಜಿಲ್ಲಾಸ್ಪತ್ರೆಯಲ್ಲಿ ಸ್ಪೆಷಲ್ ವಾರ್ಡ್ :* ಒಂದು ರಾತ್ರಿ ಒಂದು ಹಗಲಿಗೆ ಸುಮಾರು ಲಕ್ಷಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಿ ದೇವಿ ದರ್ಶನ ಮಾಡುವುದರಿಂದ ಆರೋಗ್ಯ ಇಲಾಖೆ ಕೂಡ ಹೈ ಅಲರ್ಟ್ ಘೋಷಿಸಿದೆ. ನಾಲ್ಕು ಮಾರ್ಗದಲ್ಲಿ ಪೊಲೀಸರ ಜೊತೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಗಲಿರುಳು ಶ್ರಮಿಸಲಿದ್ದಾರೆ. ಭಕ್ತರಿಗೆ ಬೆಟ್ಟ ಹತ್ತುವಾಗ ಯಾವುದೇ ರೀತಿಯ ಸಮಸ್ಯೆಯಾದರೂ ಭಕ್ತರ ಆರೋಗ್ಯದ ಹಿತದೃಷ್ಟಿಯಿಂದ ಸಿಬ್ಬಂದಿಗಳು ಶ್ರಮಿಸಲಿದ್ದಾರೆ. ಜೊತೆ ಬೆಟ್ಟ ಹತ್ತುವ ನಾಲ್ಕು ಮಾರ್ಗದಲ್ಲಿ ನಾಲ್ಕು ಆಂಬುಲೆನ್ಸ್ ಗಳ ಜೊತೆ ಒಂದು ಸಂಚಾರಿ ಆಂಬುಲೆನ್ಸ್ ಕೂಡ ಕಾರ್ಯನಿರ್ವಹಿಸಲಿದೆ. ಜೊತೆಗೆ, ಮುಂಜಾಗೃತ ಕ್ರಮವಾಗಿ ಜಿಲ್ಲಾಸ್ಪತ್ರೆಯಲ್ಲಿ ಒಂದು ವಿಶೇಷವಾದ ಸ್ಪೆಷಲ್ ವಾರ್ಡ್ ಕೂಡ ನಿರ್ಮಾಣ ಮಾಡಿಕೊಂಡಿದ್ದಾರೆ. ಆದರೆ, ಜಾರಿಕೆ ಜೊತೆ ಕಾಡಿನ ಕಾಲು ದಾರಿಯಲ್ಲಿ ಸುಮಾರು 3 ಸಾವಿರ ಅಡಿಗೂ ಎತ್ತರದ 3-4 ಕಿ.ಮೀ. ಎತ್ತರದ ಬೆಟ್ಟವನ್ನ ಪುಟ್ಟ-ಪುಟ್ಟ ಮಕ್ಕಳು, ವಯಸ್ಸಾದ ವೃದ್ಧರೂ ಹತ್ತಿ ಇಳಿದರೂ ಈವರೆಗೂ ಯಾವೊಬ್ಬ ಭಕ್ತರಿಗೂ ಯಾವುದೇ ಅನಾಹುತ ಸಂಭವಿಸಿಲ್ಲ. ಕಾಲು ಜಾರಿರುವಂತಹಾ ಸಣ್ಣ-ಪುಟ್ಟ ಪ್ರಕರಣಗಳನ್ನ ಹೊರತುಪಡಿಸಿ ಯಾರಿಗೂ ಯಾವುದೇ ದೊಡ್ಡ ಮಟ್ಟದ ನೋವು ಸಂಭವಿಸದಿರೋದು ದೇವಿಯ ಶಕ್ತಿಗೆ ಹಿಡಿದ ಕೈಗನ್ನಡಿ.

*2 ದಿನ ಪ್ರವಾಸಿಗರಿಗೆ ನಿರ್ಬಂಧ :* ದೇವೀರಮ್ಮನ ಜಾತ್ರಾ ಮಹೋತ್ಸವಕ್ಕೆ ಮುಳ್ಳಯ್ಯನಗಿರಿ ಮಾರ್ಗದ ದತ್ತಪೀಠದ ಕಡೆಯಿಂದಲೂ ಭಕ್ತರು ಬಂದು ಮಾಣಿಕ್ಯಾಧಾರದ ಮೂಲಕ ಬೆಟ್ಟ ಹತ್ತಿ ದೇವಿ ದರ್ಶನ ಮಾಡುವುದರಿಂದ ಮುಳ್ಳಯ್ಯನಗಿರಿ ಭಾಗದ ಪ್ರವಾಸಿಗರಿಗೆ 30-31ರಂದು ನಿರ್ಬಂಧ ಹೇರಲಾಗಿದೆ. ದೇವೀರಮ್ಮನ ಜಾತ್ರೆಗೆ ಬರುವ ಭಕ್ತರಿಗೆ ನೋ ಪ್ರಾಬ್ಲಂ. ಆದರೆ, ಬೆಳಗ್ಗೆ ಬಂದು ಸಂಜೆ ಹೋಗುವ ಫ್ಲೋಟಿಂಗ್ ಟೂರಿಸ್ಟ್ ಗಳಿಗೆ ಅವಕಾಶ ಇಲ್ಲ. ಹೋಂ ಸ್ಟೇ, ರೆಸಾರ್ಟ್ ಬುಕ್ ಮಾಡಿಕೊಂಡು ಬರುವ ಟೂರಿಸ್ಟ್ ಗಳು ಬುಕ್ಕಿಂಗ್ ತೋರಿಸಿ ಹೋಗಬಹುದು. ಬುಕ್ ಮಾಡದೇ ಸುಮ್ಮನೆ ಪ್ರವಾಸಕ್ಕೆಂದು ಬಂದರೆ ಅಂತಹಾ ಪ್ರವಾಸಿಗರಿಗೆ ಕೈಮರಾ ಚೆಕ್ ಪೋಸ್ಟ್ ನಿಂದ ಮುಂದೆ ಬಿಡುವುದಿಲ್ಲ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!