September 17, 2024

MALNAD TV

HEART OF COFFEE CITY

16 ಅಡಿಯ ಹುತ್ತ ಪೂಜೆ ವೇಳೆ ಅಲುಗಾಡುತ್ತೆ, ಕಾಫಿನಾಡಲ್ಲೊಂದು ವಿಸ್ಮಯ ಉತ್ಸವ

1 min read

 

ಚಿಕ್ಕಮಗಳೂರು : ಮಹಾಮಂಗಳಾರತಿ ವೇಳೆ ಸುಮಾರು 16 ಅಡಿ ಎತ್ತರದ ಮಣ್ಣಿನ ಹುತ್ತವೊಂದು 10 ರಿಂದ 15 ಡಿಗ್ರಿ ಅಲುಗಾಡುವ ಮೂಲಕ ನೋಡುಗರಲ್ಲಿ ಆಶ್ಚರ್ಯ ಮೂಡಿಸಿ, ಭಕ್ತರನ್ನ ಮಂತ್ರಮುಗ್ಧರನ್ನಾಗಿಸಿ ನಮ್ಮ ಕಣ್ಣನ್ನ ನಾವೇ ನಂಬಲಾಗದಂತಹಾ ಅಪರೂಪದ ಜಾತ್ರೆಯೊಂದು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬಾನಹಳ್ಳಿಯಲ್ಲಿ ಶತಮಾನಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. ಶತಮಾನಗಳಿಂದ ಆ ಹುತ್ತಕ್ಕೆ ಸೂರಿಲ್ಲ. ತಡೆಗೋಡೆಗಳಿಲ್ಲ. ಆದರೂ ಮಳೆ-ಗಾಳಿಗೆ ಒಂದಿಂಚು ಕರಗಿಲ್ಲ. ಹುತ್ತದ ಸುತ್ತಲೂ ಕಲ್ಲು-ಸಿಮೆಂಟ್‍ಗಳಿಂದ ಬಂದೋಬಸ್ತ್ ಮಾಡಿದ್ದರೂ ಕೂಡ ದೀಪಾವಳಿ ಅಮಾವಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯ ದಿನ ಮಹಾಮಂಗಳಾರತಿ ವೇಳೆ ಇಲ್ಲಿ ನಡೆಯೋ ವಿಚಿತ್ರವನ್ನ ಕಂಡು ನಾಸ್ತಿಕರೂ ಕೂಡ ಆಸ್ತಿಕರಾಗುತ್ತಿದ್ದಾರೆ.

ಸುಮಾರು ನಾಲ್ಕು ಶತಮಾನಗಳ ಹಿಂದೆ ದನ ಕಾಯುವ ಹುಡುಗರು ಕಟ್ಟಿದ ಮಣ್ಣಿನ ಗೂಡು ಇಂದು ಸಾವಿರಾರು ಭಕ್ತರ ಇಷ್ಟದೈವವಾಗಿದೆ. ಹೊಯ್ಸಳರ ಕಾಲದಿಂದಲೂ ನಡೆದು ಬರುತ್ತಿರುವ ಇಲ್ಲಿನ ಆಚರಣೆಗೆ 400 ವರ್ಷಗಳ ಇತಿಹಾಸವಿದೆ. ಪ್ರತಿ ವರ್ಷ ದೀಪಾವಳಿ ಅಮಾವಸ್ಯೆಯ ನಂತರದ ಮಕ್ಕಳ ಹುಣ್ಣೆಮೆಯಂದು ನಡೆಯೋ ಉತ್ಸವದಲ್ಲಿ ಮಹಾಮಂಗಳಾರತಿ ವೇಳೆ ಈ ಹುತ್ತಾ ಸುಮಾರು 10 ರಿಂದ 15 ಡಿಗ್ರಿ ಅಂತರದಲ್ಲಿ ಅಲುಗಾಡುತ್ತೆ. ಈ ಹುತ್ತ ಬರೀ ಮಣ್ಣಿನ ಗೂಡಲ್ಲ. ದೈವಿಶಕ್ತಿಯ ಗುಡಿ. 400 ವರ್ಷಗಳ ಹಿಂದೆ, ಚಿಕ್ಕದ್ದಿದ್ದ ಗೂಡು ಇಂದು 16 ಅಡಿಗೂ ಎತ್ತರ ಬೆಳೆದಿದೆ. ಈ ಹುತ್ತಕ್ಕೆ ಸೂರಿಲ್ಲ. ಮಳೆ-ಗಾಳಿಗೆ ಕರಗಿಲ್ಲ. ವರ್ಷಪೂರ್ತಿ ಮಣ್ಣಿನ ಗೊಂಬೆಯಂತೆ ನಿಂತ ಹುತ್ತ ವರ್ಷಕ್ಕೊಮ್ಮೆ ಭಕ್ತರನ್ನ ಮೂಕವಿಸ್ಮಿತರನ್ನಾಗಿಸುತ್ತೆ. ಈ ಪವಾಡವನ್ನ ನೋಡಲೆಂದು ಬಂದವರು ನಾಗಪ್ಪನ ಭಕ್ತರಾಗಿ ಪ್ರತಿ ವರ್ಷ ಈ ಉಣ್ಣಕ್ಕಿ ಉತ್ಸವಕ್ಕೆ ಬರುತ್ತಿದ್ದಾರೆ.

 

 

ಉತ್ಸವದಂದು ಯಾವುದೇ ಗಾಯವಾಗದ ಕರುವಿನ ಕಿವಿಯನ್ನ ಕತ್ತರಿಸಿ ದೇವರ ಕರುವೆಂದು ಕಾಡಿಗೆ ಬಿಡುವ ವಾಡಿಕೆ ಇಂದಿಗೂ ಜೀವಂತವಿದೆ. ಇದರಿಂದ ಊರಿನ ದನಕರುಗಳು ಆರೋಗ್ಯದಿಂದ ಇದ್ದು ಯಾವುದೇ ಅನಾಹುತಗಳು ನಡೆಯೋದಿಲ್ಲ ಅನ್ನೋದು ನಂಬಿಕೆ. ದನ ಕಾಯುವ ಹುಡುಗರು ಕಟ್ಟಿದ ಹುತ್ತವಾದ್ದರಿಂದ ಕರುವನ್ನ ಕಾಡಿಗೆ ಹೊಡೆಯೋ ಆಚರಣೆ ಬೆಳೆದು ಬಂದಿದೆ. ಉತ್ಸವದ ದಿನ ಕರುವನ್ನ ಹುತ್ತಕ್ಕೆ ಸುತ್ತಿಸುವ ವೇಳೆ ಕರುವಿನ ಮೇಲೆ ಮಂಡಕ್ಕಿ (ಪುರಿ) ಹಾಕುತ್ತೇವೆ ಎಂದು ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿ ಹರಕೆ ಕಟ್ಟಿಕೊಂಡರೆ ಎಂತಹಾ ಕಷ್ಟವೂ ಕಳೆಯುತ್ತೆ ಅನ್ನೋದು ಭಕ್ತರ ನಂಬಿಕೆ. ಪ್ರತಿವರ್ಷ ದೀಪಾವಳಿಯ ನಂತರದ ಮಕ್ಕಳ ಹುಣ್ಣಿಮೆಯ ಗುರುವಾರ ಅಥವಾ ಭಾನುವಾರ ಈ ಉತ್ಸವ ನಡೆಯಲಿದೆ. ಚರ್ಮರೋಗ, ಮಕ್ಕಳಾಗದವರು, ದನಕರು ಸಾಯುತ್ತಿದ್ದರೆ ಅಥವಾ ಆಗಾಗ್ಗೆ ಆರೋಗ್ಯ ಹದಗೆಡುತ್ತಿದ್ದರೆ ಇಲ್ಲಿಗೆ ಹರಕೆ ಕಟ್ಟಿದರೆ ಸಾಕು ವರ್ಷದೊಳಗೆ ಆ ಹರಕೆ ಈಡೇರುತ್ತಂತೆ. ಹಾಗಾಗಿ, ಸುತ್ತಮುತ್ತಲಿನ ಜಿಲ್ಲೆಯ ಜನರು ಈ ನಾಗಪ್ಪನ ಮಾಯೆಗೆ ಬೆರಗಾಗಿದ್ದಾರೆ.

ತರ್ಕಕ್ಕೆ ನಿಲುಕದ ಈ ಗ್ರಾಮದ ಉತ್ಸವ ಇಂದಿಗೂ ಪ್ರಶ್ನಾತೀತ. ಹುತ್ತ ಅಲುಗಾಡೋದ್ರ ಹಿಂದೆ ವೈಜ್ಞಾನಿಕ ಕಾರಣವಿದ್ಯೋ ಅಥವಾ ದೈವಿಶಕ್ತಿಯ ಪ್ರಭಾವವಿದ್ಯೋ ಅನ್ನೋದು ಇಂದಿಗೂ ನಿಗೂಢ. ದನ ಕಾಯೋ ಹುಡುಗರ ಭಕ್ತಿಯ ಹಿಂದಿರೋ ಈ ಹುತ್ತಾ ಅಲುಗಾಡುತ್ತ ಪವಾಡವನ್ನೇ ಸೃಷ್ಟಿಸಿದ್ರೆ, ಹುತ್ತ ಅಲುಗಾಡೋದ್ರ ಬಗ್ಗೆ ಆಸ್ತಿಕ ಹಾಗೂ ನಾಸ್ತಿಕರಲ್ಲಿ ಹಲವು ವಾದ-ವಿವಾದಗಳು ಇವೆ. ಆದರೆ, ನೋಡುಗರ ಕಣ್ಮುಂದೆ ನಡೆಯೋ ಈ ವಿಚಿತ್ರ ಹಾಗೂ ವಿಶಿಷ್ಠ ಪವಾಡ ಮಾತ್ರ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದೆ. ಭೂಗರ್ಭದ ಒಡಲಾಳದಲ್ಲಿ ಅಡಗಿರೋ ಒದೊಂದು ಸತ್ಯ ಹೊರಬಂದಾಗಲೂ ದೇವರಿರೋದು ಸತ್ಯ ಅನ್ಸತ್ತೆ. ಜನ ಅದನ್ನ ನಂಬಿದ್ದಾರೆ.

ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್  ಮಾಡಿ,

https://youtube.com/channel/UCbV1djwI3wZ-HVhKoGSaq1g

 

ನಿಮ್ಮ ಮಲ್ನಾಡ್ ಟಿವಿ ಇದೀಗ ಆಪ್ ನಲ್ಲಿ ಲಭ್ಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಆಪ್ ಡೌನ್ಲೋಡ್ ಮಾಡಿಕೊಳ್ಳಿ

Leave a Reply

Your email address will not be published. Required fields are marked *

You may have missed

error: Content is protected !!