37 ಸಾವಿರ ಕೋಟಿ ಬಾಕಿ: ಸಾಲದ ಸುಳಿಗೆ ಸಿಲುಕಿ ಗುತ್ತಿಗೆದಾರರ ಕಣ್ಣೀರು – ಮಾರ್ಚ್ 5ಕ್ಕೆ ಬೆಂಗಳೂರು ಚಲೋ.

Spread the love
Spread the love

 

 

ಚಿಕ್ಕಮಗಳೂರು: ರಾಜ್ಯ ಸರ್ಕಾರದ ವಿರುದ್ಧ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ತೀವ್ರ ವಾಗ್ದಾಳಿ ನಡೆಸಿದ್ದು, ಬಾಕಿ ಹಣ ಬಿಡುಗಡೆಗೆ ಆಗ್ರಹಿಸಿ ಮಾರ್ಚ್ 5 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಸರ್ಕಾರದಲ್ಲಿ ಕೆಲಸ ಪಡೆಯಲು ಕಮಿಷನ್ ಇಲ್ಲದಿದ್ದರೂ, ಬಾಕಿ ಇರುವ ಬಿಲ್ ಹಣ ಬಿಡುಗಡೆ ಮಾಡಲು ಹೆಚ್ಚಿನ ಕಮಿಷನ್ ಕೇಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಬೆಂಬಲದಿಂದಲೇ ಈ ಸರ್ಕಾರ ಅಧಿಕಾರಕ್ಕೆ ಬಂದಿದೆ ಎನ್ನುವುದನ್ನು ಮರೆತು, ಈಗ ಗುತ್ತಿಗೆದಾರರನ್ನು ತಾತ್ಸಾರದಿಂದ ಕಾಣುತ್ತಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ವರ್ಷಗಳಿಂದ ಮಾಡಿದ ಕೆಲಸಕ್ಕೆ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಕಂಗಾಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 380 ಕೋಟಿ ರೂಪಾಯಿ ಹಾಗೂ ರಾಜ್ಯಾದ್ಯಂತ ಒಟ್ಟು 37 ಸಾವಿರ ಕೋಟಿ ರೂಪಾಯಿ ಬಾಕಿ ಇದೆ ಎಂದು ಮಂಜುನಾಥ್ ಮಾಹಿತಿ ನೀಡಿದ್ದಾರೆ. ಹಣ ಕೇಳಲು ಹೋದರೆ ಮುಖ್ಯಮಂತ್ರಿಗಳು ಇದು ಹಳೆಯ ಬಾಕಿ ಎಂದು ಹೇಳುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದ ಅವರು, ಮನೆಯ ಯಜಮಾನನಾದವರು ಬಾಕಿ ತೀರಿಸುವ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ. ಕುಟುಂಬದ ಒಡವೆಗಳನ್ನು ಅಡವಿಟ್ಟು ಕೆಲಸ ಮಾಡಿರುವ ಗುತ್ತಿಗೆದಾರರು ಇಂದು ಸಾಲಗಾರರಾಗಿ ಆತ್ಮಹತ್ಯೆಯಂತಹ ತೀವ್ರ ನಿರ್ಧಾರಗಳಿಗೆ ಮುಂದಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಸಾಲ ಮಾಡಿಯಾದರೂ ನಮ್ಮ ಬಾಕಿ ಹಣವನ್ನು ಪಾವತಿಸಲಿ, ನಾವು ಆ ಹಣವನ್ನು ವೈಯಕ್ತಿಕವಾಗಿ ಬಳಸದೆ ಮತ್ತೆ ಅಭಿವೃದ್ಧಿ ಕೆಲಸಗಳಿಗೇ ವಿನಿಯೋಗಿಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *