ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ ಮೂಲಕ ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 1.28 ಕೋಟಿ ರೂಪಾಯಿ ಹಣ ಕಳೆದುಕೊಂಡು ವಂಚನೆಗೊಳಗಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.
ಕಡೂರು ತಾಲೂಕಿನ ನಿವಾಸಿ ಕಲ್ಲೇಗೌಡ ಎಂಬುವವರೇ ವಂಚನೆಗೊಳಗಾದ ದುರ್ದೈವಿ. ಇವರು ಫೇಸ್ಬುಕ್ನಲ್ಲಿ ಕಂಡುಬಂದ ‘FYERS’ ಎಂಬ ಟ್ರೇಡಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರು. ಈ ಮೂಲಕ ಇವರು ‘F8-FYERS ಸೆಕ್ಯೂರಿಟಿ ಗ್ರೂಪ್’ ಎಂಬ ವಾಟ್ಸಾಪ್ ಗುಂಪಿಗೆ ಸೇರ್ಪಡೆಯಾಗಿದ್ದರು. ಬಳಿಕ ವಂಚಕರು ನೀಡಿದ ‘QIB-iPO’ ಟ್ರೇಡಿಂಗ್ ಲಿಂಕ್ನಲ್ಲಿ ಖಾತೆ ತೆರೆದಿದ್ದರು.ಆರಂಭದಲ್ಲಿ ಕಲ್ಲೇಗೌಡ ಅವರು 60 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ವಂಚಕರು ಲಾಭದ ಹಣ ಎಂದು ಬಿಂಬಿಸಿ 17,800 ರೂಪಾಯಿಗಳನ್ನು ಇವರ ಖಾತೆಗೆ ಜಮಾ ಮಾಡುವ ಮೂಲಕ ನಂಬಿಕೆ ಹುಟ್ಟಿಸಿದ್ದರು. ಹೆಚ್ಚಿನ ಲಾಭದ ಆಸೆಗೆ ಬಿದ್ದ ಕಲ್ಲೇಗೌಡ ಅವರು, ವಂಚಕರು ಹಂತ ಹಂತವಾಗಿ ಕೇಳಿದಾಗಲೆಲ್ಲಾ ಹಣವನ್ನು ವರ್ಗಾವಣೆ ಮಾಡಿದ್ದಾರೆ.
1 ಕೋಟಿ 28 ಲಕ್ಷದ 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದ ಅವರು, ಅಪ್ಲಿಕೇಶನ್ನಲ್ಲಿ ತಮಗೆ ಬರುತ್ತಿದ್ದ ಲಾಭವನ್ನು ಕಂಡು ಸಂಭ್ರಮಿಸಿದ್ದರು. ಆದರೆ, ಹೂಡಿಕೆ ಮಾಡಿದ ಹಣ ಮತ್ತು ಬಂದ ಲಾಭವನ್ನು ಹಿಂಪಡೆಯಲು (Withdraw) ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ.
ಹಲವು ಪ್ರಯತ್ನಗಳ ನಂತರವೂ ಹಣ ವಿತ್ಡ್ರಾ ಮಾಡಲು ಸಾಧ್ಯವಾಗದಿದ್ದಾಗ ಮತ್ತು ವಂಚಕರಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಬಾರದಿದ್ದಾಗ ತಾನು ಮೋಸ ಹೋಗಿರುವುದು ಕಲ್ಲೇಗೌಡ ಅವರಿಗೆ ಅರಿವಾಗಿದೆ. ಕೂಡಲೇ ಅವರು ಚಿಕ್ಕಮಗಳೂರು ಸೆನ್ (CEN) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ್ದಾರೆ.
ಸಾರ್ವಜನಿಕರು ಇಂತಹ ಅಪರಿಚಿತ ಆನ್ಲೈನ್ ಟ್ರೇಡಿಂಗ್ ಲಿಂಕ್ಗಳು ಹಾಗೂ ವಾಟ್ಸಾಪ್ ಗ್ರೂಪ್ಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.
















Leave a Reply