ಚಿಕ್ಕಮಗಳೂರು: ತಾಲೂಕಿನ ಹೊಸಪೇಟೆ ಗ್ರಾಮದಲ್ಲಿ ನಡೆದ ಸಂತೆಯಲ್ಲಿ ಮತಾಂತರ ಯತ್ನ ನಡೆದಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಇಬ್ಬರನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಂತೆಯಲ್ಲಿ “ನಿಮ್ಮ ದುಃಖ ಸಂತೋಷವಾಗಿ ಬದಲಾಗುತ್ತೆ” ಎಂಬ ಶೀರ್ಷಿಕೆಯ ಪುಸ್ತಕಗಳನ್ನು ಹಂಚಿ ಮತಾಂತರಕ್ಕೆ ಯತ್ನಿಸುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸುಮಾರು 2000 ಪುಸ್ತಕಗಳನ್ನು ತೆಗೆದುಕೊಂಡು ಬಂದಿದ್ದ ಮಧ್ಯವಯಸ್ಕ ವ್ಯಕ್ತಿ ಹಾಗೂ ವೃದ್ಧನೊಬ್ಬರು ಮನೆ-ಮನೆಗೆ ತೆರಳಿ ಪುಸ್ತಕ ವಿತರಿಸುತ್ತಿದ್ದರು ಎನ್ನಲಾಗಿದೆ.
ಈ ವಿಚಾರ ತಿಳಿದ ಸ್ಥಳೀಯರು ಮತ್ತು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಸಂತೆಯಲ್ಲೇ ಇಬ್ಬರನ್ನು ತಡೆದು ಪ್ರಶ್ನಿಸಿ, ಧರ್ಮದೇಟು ನೀಡಿದ್ದಾರೆ. “ನೀವು ಕನ್ವರ್ಟ್ ಆಗಿದ್ದೀರಾ? ಹಿಂದೂ ಧರ್ಮಕ್ಕೆ ಸೇರಿ” ಎಂದು ತಾಕೀತು ಮಾಡಿರುವ ಘಟನೆ ನಡೆದಿದೆ.
ಘಟನೆಯ ವೇಳೆ ಇಬ್ಬರು ಓಮ್ನಿ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದರೂ, ಬೈಕ್‌ನಲ್ಲಿ ಬೆನ್ನಟ್ಟಿದ ಕಾರ್ಯಕರ್ತರು ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನವರು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.














Leave a Reply