🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ನಿಯಮ ಗಾಳಿಗೆ: ಪ್ರಭಾವಿ ವ್ಯಕ್ತಿಯಿಂದ ಅಕ್ರಮ ಕಾಮಗಾರಿ

---Advertisement---

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ  ನಿಯಮ ಉಲ್ಲಂಘನೆ ಪ್ರಕರಣ ಬೆಳಕಿಗೆ ಬಂದಿದೆ. ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲೇ ಖಾಸಗಿ ಕಾಫಿ ತೋಟದ ಸಿಬ್ಬಂದಿಗಳು ನಿರ್ಬಂಧಿತವಾಗಿ ಓಡಾಟ ನಡೆಸುತ್ತಿರುವುದು ಮತ್ತು ಅರಣ್ಯ ನಿಯಮಗಳನ್ನು ಬಹಿರಂಗವಾಗಿ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.
ಅರಣ್ಯದೊಳಗಿನ ಝರಿಯ ಬಳಿ ಮೋಟಾರ್ ಹಾಗೂ ಪೈಪ್‌ಗಳನ್ನು ಅಳವಡಿಸಿ, ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಗೆ ಪೈಪ್ ಹಾಯಿಸಿ ಕಾಫಿ ತೋಟಕ್ಕೆ ನೀರು ಸರಬರಾಜು ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಪೈಪ್ ಅಳವಡಿಕೆ ಕಾರ್ಯಕ್ಕಾಗಿ ಅರಣ್ಯ ಪ್ರದೇಶದಲ್ಲೇ ಮರಗಳನ್ನು ಕಡಿದು ಪರಿಸರ ಹಾನಿ ಮಾಡಲಾಗಿದೆ ಎಂಬ ಆರೋಪವೂ ಇದೆ.
ಇದೇ ವೇಳೆ, ಹತ್ತಾರು ಕಾರ್ಮಿಕರನ್ನು ಬಳಸಿಕೊಂಡು ನಿಷೇಧಿತ ಪ್ರದೇಶದಲ್ಲಿ ಪೈಪ್ ಅಳವಡಿಕೆ ಕಾರ್ಯ ನಡೆದಿದೆ. ಪಿಕಪ್ ವಾಹನಗಳ ಮೂಲಕ ಸಂರಕ್ಷಿತ ಪ್ರದೇಶದಲ್ಲೇ ಓಡಾಟ ನಡೆಸಲಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ಸಿಮೆಂಟ್ ಬಳಸಿ ಶಾಶ್ವತ ಕಾಮಗಾರಿ ಕೂಡ ನಡೆಸಿರುವುದು ಪ್ರಕರಣವನ್ನು ಮತ್ತಷ್ಟು ಗಂಭೀರಗೊಳಿಸಿದೆ.
ಈ ಘಟನೆ ಚಿಕ್ಕಮಗಳೂರು ತಾಲೂಕಿನ ವಿರೂಪಾಕ್ಷಖಾನ್ ಅರಣ್ಯ ಬೇಟೆ ಶಿಬಿರದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ನಡೆದಿದೆ. ಪ್ರಭಾವಿ ವ್ಯಕ್ತಿಯ ಕಾಫಿ ತೋಟಕ್ಕೆ ನೀರು ಸರಬರಾಜು ಮಾಡಲು ಈ ಎಲ್ಲಾ ಅಕ್ರಮಗಳು ನಡೆದಿವೆ ಎಂಬ ಆರೋಪ ಕೇಳಿಬಂದಿದೆ.
ನಿಯಮ ಉಲ್ಲಂಘನೆ ನಡೆದಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಜೋನ್‌ನಲ್ಲೂ ನಿರ್ಬಂಧ ಉಲ್ಲಂಘನೆ ನಡೆದಿರುವ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

Join WhatsApp

Join Now

Join Telegram

Join Now