ಚಿಕ್ಕಮಗಳೂರಲ್ಲಿ ಕರಡಿ ಅಟ್ಟಹಾಸ: ಬಸ್ ನಿಲ್ದಾಣದ ಬಳಿಯೇ ಓಡಾಟ 

Spread the love

 

 

ಮಲೆನಾಡು ಭಾಗದಲ್ಲಿ ಆನೆಗಳ ಅಬ್ಬರ ಮತ್ತು ಬಯಲು ಸೀಮೆಯಲ್ಲಿ ಚಿರತೆಗಳ ಕಾಟದಿಂದ ಈಗಾಗಲೇ ಹೈರಾಣಾಗಿರುವ ಚಿಕ್ಕಮಗಳೂರು ಜಿಲ್ಲೆಯ ಜನತೆಗೆ ಇದೀಗ ನಗರ ಪ್ರದೇಶದಲ್ಲೂ ವನ್ಯಪ್ರಾಣಿಗಳ ಭೀತಿ ಎದುರಾಗಿದೆ. ಚಿಕ್ಕಮಗಳೂರು ನಗರದ ಅತ್ಯಂತ ಜನನಿಬಿಡ ಎಂ.ಜಿ. ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ ಕರಡಿಯೊಂದು ರಾಜಾರೋಷವಾಗಿ ಸಂಚರಿಸಿರುವುದು ನಾಗರಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಾಡುಪ್ರಾಣಿಗಳ ಉಪಟಳವು ಕೇವಲ ಗ್ರಾಮೀಣ ಭಾಗಕ್ಕಷ್ಟೇ ಸೀಮಿತವಾಗದೆ ಈಗ ನಗರಕ್ಕೂ ವ್ಯಾಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

​ಮಂಜು ಮುಸುಕಿದ ಮುಂಜಾನೆಯಲ್ಲಿ ಆಹಾರ ಅರಸಿ ಬಂದಿರಬಹುದಾದ ಈ ಕರಡಿಯು ನಗರದ ಶಂಕರಪುರ ದಿಂದ ಎಂಜಿ ರಸ್ತೆಯ ಮೂಲಕ ಗುರುನಾಥ ಮಾರ್ಗವಾಗಿ ಸಂಚರಿಸಿ ಮಿಲನ್ ಥಿಯೇಟರ್ ಬಳಿ ತಲುಪಿದೆ. ಈ ದೃಶ್ಯವನ್ನು ಸ್ಥಳೀಯ ಬೈಕ್ ಸವಾರನೊಬ್ಬ ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಇನ್ನು ಬಸ್ ನಿಲ್ದಾಣದ ಸಮೀಪ ಯುವಕನೊಬ್ಬ ಕರಡಿಯನ್ನು ಬೆನ್ನಟ್ಟಿದ ಘಟನೆಯೂ ನಡೆದಿದ್ದು, ಬೆದರಿದ ಕರಡಿಯು ಮಿಲನ್ ಥಿಯೇಟರ್ ಬಳಿಯ ಕತ್ತಲಿನಲ್ಲಿ ಕಣ್ಮರೆಯಾಗಿದೆ. ಪ್ರಮುಖ ರಸ್ತೆಗಳಲ್ಲಿ ಕರಡಿ ಕಾಣಿಸಿಕೊಂಡಿರುವುದರಿಂದ ಬೆಳಗಿನ ಜಾವ ವಾಯುವಿಹಾರಕ್ಕೆ ಬರುವವರು ಮತ್ತು ಸಾರ್ವಜನಿಕರು ಸಂಚರಿಸಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಈ ಕರಡಿಯನ್ನು ಸೆರೆಹಿಡಿದು ಸುರಕ್ಷಿತವಾಗಿ ಕಾಡಿಗೆ ಸ್ಥಳಾಂತರಿಸುವ ಮೂಲಕ ನಗರವಾಸಿಗಳ ನೆಮ್ಮದಿಯನ್ನು ಕಾಪಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *