ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿದ ಚುರ್ಚೆಗುಡ್ಡ ಮೀಸಲು ಅರಣ್ಯ; 15 ಎಕರೆ ಅರಣ್ಯ ಭಸ್ಮ

Spread the love

 

​ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲ ತಾಪಕ್ಕೆ ಇದೀಗ ಕಾಡ್ಗಿಚ್ಚಿನ ಆತಂಕ ಎದುರಾಗಿದೆ. ನಗರದ ಹೊರವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸುಮಾರು 15 ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

​ಚಿಕ್ಕಮಗಳೂರು ತಾಲೂಕಿನ ಚುರ್ಚೆಗುಡ್ಡ ಮೀಸಲು ಅರಣ್ಯ ಹಾಗೂ ಹೊಸ ಕೋರ್ಟ್ ಹಿಂಭಾಗದಲ್ಲಿರುವ ನ್ಯಾಯಗಿರಿ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಬೇಸಿಗೆಯ ಬಿರು ಬಿಸಿಲಿನಿಂದಾಗಿ ಒಣಗಿದ್ದ ಗಿಡಗಂಟೆಗಳಿಗೆ ಬೆಂಕಿ ತಗುಲಿದ ಪರಿಣಾಮ, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಗುಡ್ಡಕ್ಕೆ ವ್ಯಾಪಿಸಿದೆ.

​ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಪ್ರದೇಶದ ಎತ್ತರದ ಭಾಗಗಳಿಗೆ ವಾಹನಗಳು ಹೋಗಲು ಸಾಧ್ಯವಾಗದ ಕಾರಣ, ಸಿಬ್ಬಂದಿಗಳು ಮರದ ಹಸಿ ಟೊಂಗೆಗಳನ್ನು ಬಳಸಿಯೇ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ  .

​”ಬಿಸಿಲ ತೀವ್ರತೆ ಹೆಚ್ಚಿರುವುದರಿಂದ ಬೆಂಕಿ ವೇಗವಾಗಿ ಹರಡುತ್ತಿದೆ. ಗಾಳಿಯ ವೇಗವೂ ಹೆಚ್ಚಿರುವುದು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದರೂ ಬೆಂಕಿ ನಿಯಂತ್ರಿಸಲು  ಪ್ರಯತ್ನ ಮಾಡಲಾಗುತ್ತಿದೆ,”

​ಈ ಘಟನೆಯಿಂದಾಗಿ ಅರಣ್ಯದಲ್ಲಿದ್ದ ಅಮೂಲ್ಯ ಗಿಡಮರಗಳು ಹಾಗೂ ಸಣ್ಣಪುಟ್ಟ ವನ್ಯಜೀವಿಗಳಿಗೆ ಹಾನಿಯಾಗಿರುವ ಆತಂಕ ಎದುರಾಗಿದೆ. ಬೆಂಕಿ ಹರಡದಂತೆ ತಡೆಯಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

Leave a Reply

Your email address will not be published. Required fields are marked *