ಚಿಕ್ಕಮಗಳೂರು: ನಗರದ ಐ.ಜಿ (IG) ರಸ್ತೆಯಲ್ಲಿರುವ ಫರ್ನಿಚರ್ ಅಂಗಡಿಯೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪ್ರಕರಣಕ್ಕೆ ಅನಿರೀಕ್ಷಿತ ಟ್ವಿಸ್ಟ್ ಸಿಕ್ಕಿದ್ದು, ವ್ಯಾಪಾರ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
ಕಳೆದ ಭಾನುವಾರ ಚಿಕ್ಕಮಗಳೂರು ನಗರದ ಐ.ಜಿ ರಸ್ತೆಯಲ್ಲಿರುವ ‘ಎ.ಆರ್ (A.R) ಫರ್ನಿಚರ್’ ಅಂಗಡಿಯಲ್ಲಿ ಅನಿರೀಕ್ಷಿತವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ದುರ್ಘಟನೆಯಲ್ಲಿ ಅಂಗಡಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಫರ್ನಿಚರ್ ಸಾಮಗ್ರಿಗಳು ಸಂಪೂರ್ಣವಾಗಿ ಭಸ್ಮವಾಗಿದ್ದವು.
ಪೊಲೀಸ್ ತನಿಖೆಯಲ್ಲಿ ಎ.ಆರ್ ಫರ್ನಿಚರ್ ಅಂಗಡಿಯ ಪಕ್ಕದಲ್ಲೇ ‘ಮಹಾರಾಜ ಫರ್ನಿಚರ್’ ಎಂಬ ಅಂಗಡಿ ಇದೆ. “ತನ್ನ ಅಂಗಡಿಯಲ್ಲಿ ವ್ಯಾಪಾರವಿಲ್ಲ, ಆದರೆ ಪಕ್ಕದ ಎ.ಆರ್ ಫರ್ನಿಚರ್ ಅಂಗಡಿಯಲ್ಲಿ ಉತ್ತಮ ವ್ಯಾಪಾರ ನಡೆಯುತ್ತಿದೆ” ಎಂಬ ಅಸೂಯೆ ಮತ್ತು ದ್ವೇಷವೇ ಈ ಕೃತ್ಯಕ್ಕೆ ಪ್ರೇರಣೆಯಾಗಿದೆ.
ದ್ವೇಷದ ಅಂಧಕಾರದಲ್ಲಿದ್ದ ಮಹಾರಾಜ ಫರ್ನಿಚರ್ ಮಾಲೀಕ ಹ್ಯಾರಿಸ್, ಎ.ಆರ್ ಫರ್ನಿಚರ್ ಅಂಗಡಿಯನ್ನು ನಾಶಪಡಿಸಲು ಸಂಚು ರೂಪಿಸಿದ್ದಾನೆ. ಇದಕ್ಕಾಗಿ ಸಾದ್ ಮತ್ತು ಯಾಕೂಬ್ ಎಂಬುವವರಿಗೆ 20 ಸಾವಿರ ರೂಪಾಯಿ ಹಣ ನೀಡಿ, ಅವರಿಂದಲೇ ಬೆಂಕಿ ಹಚ್ಚಿಸಿದ್ದಾರೆ ಎಂಬುದು ವಿಚಾರಣೆಯಲ್ಲಿ ದೃಢಪಟ್ಟಿದೆ.
ಘಟನೆಯ ನಂತರ ಎಚ್ಚೆತ್ತ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು, ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದರು. ಈ ವೇಳೆ ಕೃತ್ಯದ ಸತ್ಯಾಂಶ ಹೊರಬಂದಿದ್ದು, ತಕ್ಷಣವೇ ಕಾರ್ಯಾಚರಣೆ ನಡೆಸಿ ಮಹಾರಾಜ ಫರ್ನಿಚರ್ ಮಾಲೀಕ ಹ್ಯಾರಿಸ್ ಹಾಗೂ ಬೆಂಕಿ ಹಚ್ಚಿದ ಆರೋಪಿಗಳಾದ ಸಾದ್ ಮತ್ತು ಯಾಕೂಬ್ ಅವರನ್ನು ಬಂಧಿಸಿದ್ದಾರೆ.
ವ್ಯಾಪಾರದ ಅಸೂಯೆಯಿಂದ ಅಮಾಯಕರ ಬದುಕಿನೊಂದಿಗೆ ಚೆಲ್ಲಾಟವಾಡಿದ ಆರೋಪಿಗಳಿಗೆ ಈಗ ಕಾನೂನಿನ ಬಿಸಿ ತಟ್ಟಿದೆ. ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.
















Leave a Reply