ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಾರಿಯ ಬಜೆಟ್ ಮಂಡಿಸಿ ಮುಗಿಸುತ್ತಿದ್ದಂತೆಯೇ, ಕಾಂಗ್ರೆಸ್ ಪಾಳಯದಲ್ಲಿ ಮತ್ತೆ ‘ಕುರ್ಚಿ ಚರ್ಚೆ’ ಮುನ್ನೆಲೆಗೆ ಬಂದಿದೆ. ಕೆಪಿಸಿಸಿ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಹಾಗೂ ಡಿ.ಕೆ. ಶಿವಕುಮಾರ್ ಅವರ ಆಪ್ತ ಸಚಿನ ಮೀಗಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ರಾಜ್ಯ ರಾಜಕಾರಣದಲ್ಲಿ ಹೊಸ ಕಿಚ್ಚು ಹಚ್ಚಿದೆ. ಸದ್ಯ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡಿದ್ದರೂ, ಮುಂದಿನ ಅಂದರೆ 2027/28ನೇ ಸಾಲಿನ ಬಜೆಟ್ ಅನ್ನು ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮಂಡಿಸಲಿದ್ದಾರೆ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.
ಸಚಿನ್ ಮೀಗಾ ಅವರ ಈ ಪೋಸ್ಟ್ ಕಾಂಗ್ರೆಸ್‌ನಲ್ಲಿ ಆಂತರಿಕವಾಗಿ ನಡೆಯುತ್ತಿರುವ ನಾಯಕತ್ವದ ಫೈಟ್ ಅನ್ನು ಮತ್ತೊಮ್ಮೆ ಬಹಿರಂಗಪಡಿಸಿದಂತಿದೆ. 2026/27ರ ಬಜೆಟ್ ಸಿದ್ದರಾಮಯ್ಯನವರ ಪಾಲಾದರೆ, ಅದರ ನಂತರದ ಬಜೆಟ್ ಅನ್ನು ಡಿ.ಕೆ. ಶಿವಕುಮಾರ್ ಅವರು ಸಿಎಂ ಸ್ಥಾನ ಅಲಂಕರಿಸಿ ಜನಸಾಮಾನ್ಯರು ಹಾಗೂ ರೈತಪರವಾದ ಬಜೆಟ್ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಜೆಟ್ ಮುಗಿದ ಬೆನ್ನಲ್ಲೇ ಅಧಿಕಾರ ಹಸ್ತಾಂತರದ ಕುರಿತು ಆಪ್ತ ವಲಯದಿಂದ ಇಂತಹ ಹೇಳಿಕೆ ಬಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಮೂಡಿಸಿದೆ.











Leave a Reply