ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಕಾಡಾನೆಗಳ ದಾಳಿಯಿಂದ ಕಂಗಾಲಾಗಿರುವ ಜನರ ನೋವಿಗೆ ಸ್ಪಂದಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಇಂದು ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಒಂಬತ್ತು ಮಂದಿ ಕಾಡಾನೆ ದಾಳಿಗೆ ಬಲಿಯಾಗಿರುವುದು ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದ್ದು, ಕೇವಲ ಅಧಿಕಾರಿಗಳ ಮಾತುಗಳಿಗೆ ಸೀಮಿತವಾಗದೆ ಸಚಿವರೇ ಖುದ್ದಾಗಿ ರೈತರೊಂದಿಗೆ ಚರ್ಚಿಸಿ ಶಾಶ್ವತ ಪರಿಹಾರ ನೀಡಬೇಕೆಂಬ ಗ್ರಾಮಸ್ಥರ ಬಲವಾದ ಆಗ್ರಹಕ್ಕೆ ಮಣಿದು ಈ ಸಭೆಯನ್ನು ಆಯೋಜಿಸಲಾಗಿದೆ. ಇತ್ತೀಚೆಗೆ ಕಾಡಾನೆ ದಾಳಿಗೆ ಮಹಿಳೆ ಬಲಿಯಾದ ಸಂದರ್ಭದಲ್ಲಿ ಕಡಬಗೆರೆಯಲ್ಲಿ ನಡೆದ ಪ್ರತಿಭಟನೆ ವೇಳೆ ಉದ್ರಿಕ್ತ ಜನರು ಕಲ್ಲು ತೂರಾಟ ನಡೆಸಿದ್ದರು, ಈ ವೇಳೆ ಜಿಲ್ಲಾಡಳಿತ ನಡೆಸಿದ ಲಾಠಿ ಚಾರ್ಜ್ ರೈತರ ಕೆಂಗಣ್ಣಿಗೆ ಗುರಿಯಾಗಿತ್ತು. ಅಂದು ಮೃತರ ಶವವನ್ನು ರಸ್ತೆಯಲ್ಲಿಟ್ಟು ಸಚಿವರು ಸ್ಥಳಕ್ಕೆ ಬರುವವರೆಗೆ ಕದಲಲ್ಲ ಎಂದು ಪಟ್ಟು ಹಿಡಿದಿದ್ದ ಜನರ ಹೋರಾಟದ ಫಲವಾಗಿ ಇಂದು ಸಂವಾದ ಕಾರ್ಯಕ್ರಮ ನಡೆಯುತ್ತಿದೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಾಳೆಹೊನ್ನೂರಿನಲ್ಲಿ ಸಚಿವರು ಗ್ರಾಮಸ್ಥರ ಅಹವಾಲುಗಳನ್ನು ಆಲಿಸಲಿದ್ದು, ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲೆಯಾದ್ಯಂತ ವ್ಯಾಪಕ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಕಾಡುಪ್ರಾಣಿಗಳ ಉಪಟಳದಿಂದ ಜೀವ ಮತ್ತು ಬೆಳೆ ಕಳೆದುಕೊಳ್ಳುತ್ತಿರುವ ರೈತರು, ಅರಣ್ಯ ಇಲಾಖೆಯ ಅಧಿಕಾರಿಗಳು ನೀಡುವ ತಾಂತ್ರಿಕ ಕಾರಣಗಳ ಬದಲಿಗೆ ವಾಸ್ತವಿಕ ನೆಲೆಯಲ್ಲಿ ಪರಿಹಾರ ಸಿಗಲಿ ಎಂದು ನಿರೀಕ್ಷಿಸುತ್ತಿದ್ದಾರೆ. ಇಂದಿನ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಿರುವ ಸಚಿವ ಈಶ್ವರ್ ಖಂಡ್ರೆ ಅವರು, ಮಲೆನಾಡಿನ ಜನರ ದಶಕಗಳ ಈ ಭೀತಿ ದೂರ ಮಾಡಲು ಯಾವ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಘೋಷಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.














Leave a Reply