ಚಿಕ್ಕಮಗಳೂರು ಜಿಲ್ಲೆಯಲ್ಲಿ ಯುಗಾದಿ ದಿನವೇ ದೇವಾಲಯದ ಮುಂದೆ ವಾಮಾಚಾರ — ಗ್ರಾಮಸ್ಥರಲ್ಲಿ ಆತಂಕ

Spread the love

 

ಚಿಕ್ಕಮಗಳೂರು: ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನ ಕಳಸ ವ್ಯಾಪ್ತಿಯ ಕಂಚಿನಕೆರೆ ಗ್ರಾಮದ ಕಾಲಭೈರವೇಶ್ವರ ದೇವಾಲಯದ ಎದುರು ಯುಗಾದಿ ಹಬ್ಬದ ದಿನವೇ ವಾಮಾಚಾರ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

ನಿನ್ನೆ ರಾತ್ರಿ ಅಮಾವಾಸ್ಯೆಯ ಹಿನ್ನೆಲೆ, ಮಧ್ಯರಾತ್ರಿ ಸುಮಾರು 2 ರಿಂದ 3 ಗಂಟೆ ವೇಳೆಯಲ್ಲಿ ಈ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ದೇವಾಲಯದ ಎದುರು ದೊಡ್ಡ ಕಲ್ಲುಗಳನ್ನು ಇಟ್ಟು ವೃತ್ತಾಕಾರದ ವಿನ್ಯಾಸ ರಚಿಸಿ, ಅದರ ಮಧ್ಯದಲ್ಲಿ ಅರಿಶಿನ, ಕುಂಕುಮ, ನಿಂಬೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ, ನಾಣ್ಯ ಸೇರಿದಂತೆ ಹಲವು ವಸ್ತುಗಳನ್ನು ಬಳಸಿಕೊಂಡು ವಾಮಾಚಾರ ನಡೆಸಲಾಗಿದೆ.

ಈ ದೇವಾಲಯವು ದಕ್ಷಿಣ ಕಾಶಿ ಎಂದು ಪ್ರಸಿದ್ಧವಾಗಿರುವ ಕಳಸೇಶ್ವರ ಸ್ವಾಮಿ ದೇವಸ್ಥಾನಕ್ಕೆ ಸಂಬಂಧಿಸಿದ ಕಾಲಭೈರವನ ದೇವಾಲಯವಾಗಿದೆ. ಪ್ರತೀ ವರ್ಷ ಕಳಸೇಶ್ವರ ದೇವಾಲಯದ ಗಿರಿಜಾ ಕಲ್ಯಾಣ ರಥ ಇದೇ ಮಾರ್ಗವಾಗಿ ಸಂಚರಿಸುವುದರಿಂದ ಈ ಪ್ರದೇಶಕ್ಕೆ ವಿಶೇಷ ಮಹತ್ವವಿದೆ.

ಗಮನಾರ್ಹ ಸಂಗತಿ ಏನೆಂದರೆ, ಕಳೆದ ವರ್ಷವೂ ಯುಗಾದಿ ಹಬ್ಬದ ಮುನ್ನ ಇದೇ ದೇವಾಲಯದಲ್ಲಿ ಕಳ್ಳತನ ನಡೆದಿತ್ತು. ಇದೀಗ ಹಬ್ಬದ ದಿನವೇ ವಾಮಾಚಾರ ಕಂಡುಬಂದಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಗ್ರಾಮವು ನಿತ್ಯ ಸಾವಿರಾರು ಭಕ್ತರು ಸಂಚರಿಸುವ ಪ್ರದೇಶವಾಗಿದ್ದು, ದೇವಸ್ಥಾನದ ಸುತ್ತಮುತ್ತ ಮನೆಗಳೂ ಇದ್ದರೂ ಈ ಘಟನೆ ನಡೆದಿರುವುದು ಜನರಲ್ಲಿ ಭೀತಿ ಮೂಡಿಸಿದೆ.

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *