ಅದೃಷ್ಟಕ್ಕೂ ಪವಾಡಕ್ಕೂ ಮೀರಿದ ಘಟನೆಯೊಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ. ಕಟ್ಟಿಗೆ ತುಂಬಿದ್ದ ಲಾರಿ ಕಾರಿನ ಮೇಲೆ ಉರುಳಿ ಬಿದ್ದರೂ ದಂಪತಿ ಮತ್ತು ಮಗು ಪ್ರಾಣಾಪಾಯದಿಂದ ಪಾರಾದ ಘಟನೆ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಕ್ರಾಸ್ ಬಳಿ ನಡೆದಿದೆ.
ಚಿಕ್ಕಮಗಳೂರು ನಗರದ ಹೊರವಲಯದಲ್ಲಿರುವ ಲಕ್ಯಾ ಕ್ರಾಸ್ ಬಳಿ ಚಲಿಸುತ್ತಿದ್ದ ಕಾರಿನ ಮೇಲೆ ಕಟ್ಟಿಗೆ ತುಂಬಿಕೊಂಡು ಸಾಗುತ್ತಿದ್ದ ಲಾರಿ ಏಕಾಏಕಿ ಉರುಳಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ದಂಪತಿ ಮತ್ತು ಮಗು ವಾಹನದೊಳಗೆ ಸಿಲುಕಿಕೊಂಡಿದ್ದರು. ಅಪಘಾತದ ತೀವ್ರತೆ ಕಂಡು ಸ್ಥಳೀಯರು ಬೆಚ್ಚಿಬಿದ್ದರೂ, ಅದೃಷ್ಟವಶಾತ್ ಮೂವರೂ ಗಂಭೀರ ಗಾಯಗಳಿಲ್ಲದೆ ಪಾರಾಗಿದ್ದಾರೆ.
ಘಟನೆ ತಿಳಿದು ತಕ್ಷಣ ಸ್ಥಳೀಯರು ಧಾವಿಸಿ ಕಾರಿನೊಳಗೆ ಸಿಲುಕಿದ್ದ ದಂಪತಿ ಹಾಗೂ ಮಗುವನ್ನು ಹೊರತೆಗೆದು ರಕ್ಷಿಸಿದ್ದಾರೆ. ಈ ದೃಶ್ಯವನ್ನು ಕಂಡವರು ಇದನ್ನು ಪವಾಡಸದೃಶ ಘಟನೆ ಎಂದು ಹೇಳುತ್ತಿದ್ದಾರೆ.
ಅಪಘಾತದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲಾಗಿ ನಿಂತಿದ್ದವು. ಬಳಿಕ ಪೊಲೀಸರು ಮತ್ತು ಸ್ಥಳೀಯರು ಟ್ರಾಫಿಕ್ ವ್ಯವಸ್ಥೆಯನ್ನು ಸರಿಪಡಿಸಿದರು.
ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.













Leave a Reply