ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರ ಜಲಪಾತದ ಬಳಿ ಕೇರಳದ ಪಾಲಕ್ಕಾಡ್ ಮೂಲದ ಹತ್ತನೇ ತರಗತಿ ವಿದ್ಯಾರ್ಥಿನಿ ನಂದನಾ ನಾಪತ್ತೆಯಾಗಿರುವುದು ಕಾಫಿನಾಡಿನಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಸುಮಾರು 40 ಮಂದಿಯ ಪ್ರವಾಸಿ ತಂಡದೊಂದಿಗೆ ಬಂದಿದ್ದ ಈ ಬಾಲಕಿ, ಮಂಗಳವಾರ ಸಂಜೆ ಕುಟುಂಬದವರ ಕಣ್ಣೆದುರೇ ನಿಗೂಢವಾಗಿ ಮಾಯವಾಗಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಅಖಾಡಕ್ಕಿಳಿದ ಪೊಲೀಸ್ ಮತ್ತು ಅರಣ್ಯ ಇಲಾಖೆಯ 30ಕ್ಕೂ ಹೆಚ್ಚು ಸಿಬ್ಬಂದಿಗಳು ಮಂಗಳವಾರ ಮಧ್ಯರಾತ್ರಿ 1 ಗಂಟೆಯವರೆಗೆ ಬೆಟ್ಟದ ಮೂಲೆ ಮೂಲೆಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ ದಟ್ಟವಾದ ಮಂಜು ಮತ್ತು ಕತ್ತಲೆಯ ಕಾರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಯಾವುದೇ ಸುಳಿವು ಸಿಗದೆ ತಂಡಗಳು ವಾಪಸ್ಸಾಗಿದ್ದವು.
ಇಂದು ಮುಂಜಾನೆಯಿಂದಲೇ ಶೋಧ ಕಾರ್ಯ ಮತ್ತಷ್ಟು ಬಿರುಸುಗೊಂಡಿದ್ದು, ಕಾಡಿನ ದುರ್ಗಮ ಹಾದಿಗಳಲ್ಲಿ ಬಾಲಕಿಯನ್ನು ಪತ್ತೆಹಚ್ಚಲು ರಕ್ಷಣಾ ತಂಡಗಳು ಈಗ ಆಧುನಿಕ ಡ್ರೋನ್ ಕ್ಯಾಮೆರಾಗಳನ್ನು ಬಳಸುತ್ತಿವೆ. ಪಶ್ಚಿಮ ಘಟ್ಟದ ಕಡಿದಾದ ಬೆಟ್ಟಗಳು ಮತ್ತು ದಟ್ಟಾರಣ್ಯದ ಸವಾಲುಗಳ ನಡುವೆಯೂ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರವಾಸಕ್ಕೆಂದು ಬಂದು ಮಗಳನ್ನೇ ಕುಟುಂಬಸ್ಥರು ಆತಂಕದಲ್ಲಿದ್ದಾರೆ. ಸ್ಥಳೀಯರ ನೆರವಿನೊಂದಿಗೆ ಬಾಲಕಿಯ ಪತ್ತೆಗಾಗಿ ಸರ್ವ ಪ್ರಯತ್ನಗಳು ನಡೆಯುತ್ತಿವೆ.














Leave a Reply