ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಆಟೋ ಎಲ್‌ಪಿಜಿ ದರದಲ್ಲಿ ಏಕಾಏಕಿ ಭಾರೀ ಏರಿಕೆ ಕಂಡುಬಂದಿದ್ದು, ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಮಲ್ಲಂದೂರು ರಸ್ತೆಯಲ್ಲಿರುವ ಗೋ ಗ್ಯಾಸ್ ಆಟೋ ಎಲ್‌ಪಿಜಿ ಬಂಕ್‌ನಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ₹85 ಇದ್ದ ದರ, ಕೇವಲ ಕೆಲವು ಗಂಟೆಗಳಲ್ಲೇ ಮಧ್ಯಾಹ್ನ 3 ಗಂಟೆಗೆ ₹99.5ಕ್ಕೆ ಏರಿಕೆಯಾಗಿದೆ. ಈ ದಿಢೀರ್ ದರ ಏರಿಕೆ ಚಾಲಕರಿಗೆ ಆಘಾತ ಉಂಟುಮಾಡಿದೆ.
ದರ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸರ್ಕಾರಿ ಆದೇಶವನ್ನು ಪ್ರದರ್ಶಿಸದಿರುವುದರಿಂದ, ಬಂಕ್ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಸ್ಟಾಕ್ ಇದ್ದರೂ ದರ ಹೆಚ್ಚಿಸಲಾಗಿದೆ” ಎಂದು ಆಟೋ ಚಾಲಕರು ಆರೋಪಿಸಿದ್ದಾರೆ.
ಆಕ್ರೋಶಗೊಂಡ ಚಾಲಕರು ಬಂಕ್‌ಗೆ ಆಗಮಿಸಿ ಮ್ಯಾನೇಜರ್‌ರನ್ನು ತರಾಟೆಗೆ ತೆಗೆದುಕೊಂಡು, ಹಳೆಯ ದರದಲ್ಲೇ ಗ್ಯಾಸ್ ನೀಡುವಂತೆ ಒತ್ತಾಯಿಸಿದರು. “ಸರ್ಕಾರದ ಆದೇಶವನ್ನು ತೋರಿಸಿ ಅಥವಾ ಹಳೆಯ ದರದಲ್ಲೇ ನೀಡಿ” ಎಂದು ಅವರು ಪಟ್ಟು ಹಿಡಿದರು.
ಹಳೆಯ ದರಕ್ಕೆ ಗ್ಯಾಸ್ ನೀಡದಿದ್ದಲ್ಲಿ, ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.














Leave a Reply