ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಪಟ್ಟಣದಲ್ಲಿ ನಡೆದ ಕಿರಾಳಮ್ಮ ದೇವಿಯ ರಥೋತ್ಸವವು ಸಂಭ್ರಮದ ಬದಲು ಕುಟುಂಬವೊಂದಕ್ಕೆ ಕಣ್ಣೀರು ತಂದಿದೆ. ರಥ ಎಳೆಯುವ ಸಂದರ್ಭದಲ್ಲಿ ಉಂಟಾದ ಜನಸಂದಣಿಯ ನೂಕುನುಗ್ಗಲಿನಲ್ಲಿ ಸಿಲುಕಿ ಎಂಟನೇ ತರಗತಿಯ ಪ್ರಜ್ವಲ್ ಎಂಬ ಬಾಲಕ ಆಯತಪ್ಪಿ ರಥದ ಬೃಹತ್ ಚಕ್ರಕ್ಕೆ ಸಿಲುಕಿದ್ದಾನೆ. ಬಾಲಕನ ಬಲಗಾಲಿನ ಮೂರು ಬೆರಳುಗಳು ಕತ್ತರಿಸಿ ಹೋಗಿದ್ದು, ಆತ ಶಾಶ್ವತವಾಗಿ ಅಂಗವೈಕಲ್ಯ ಅನುಭವಿಸುವಂತಾಗಿದೆ. ಘಟನೆಯ ಸಮಯದಲ್ಲಿ ಬಾಲಕ ನೋವಿನಿಂದ ಕಿರುಚಾಡುತ್ತಿದ್ದರೂ ಆರಂಭದಲ್ಲಿ ಯಾರೂ ಸಹಾಯಕ್ಕೆ ಧಾವಿಸಲಿಲ್ಲ, ಅಂತಿಮವಾಗಿ ಆತನ ದೊಡ್ಡಪ್ಪ ಪುಟ್ಟಪ್ಪ ಅವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕ ಚೇತರಿಸಿಕೊಳ್ಳುತ್ತಿದ್ದು , ಆತನ ಕುಟುಂಬವು ತೀವ್ರ ಬಡತನದಲ್ಲಿರುವುದರಿಂದ ವೈದ್ಯಕೀಯ ವೆಚ್ಚ ಭರಿಸಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದೆ. ಮಗನ ಭವಿಷ್ಯ ಮತ್ತು ಶಿಕ್ಷಣದ ಕುರಿತು ತಂದೆ ಕಣ್ಣೀರು ಹಾಕುತ್ತಿದ್ದು, ಸಾರ್ವಜನಿಕರು ಹಾಗೂ ದಾನಿಗಳು ನೆರವಿಗೆ ಬರಬೇಕೆಂದು ಮನವಿ ಮಾಡಿದ್ದಾರೆ.
ಮತ್ತೊಂದೆಡೆ, ಪವಿತ್ರವಾದ ರಥೋತ್ಸವದ ವೇಳೆ ಆಯೋಜಿಸಲಾಗಿದ್ದ ‘ನಂಗನಾಚ್’ ಎಂಬ ಅಶ್ಲೀಲ ನೃತ್ಯ ಪ್ರದರ್ಶನದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಇಂತಹ ವಿಕೃತ ನೃತ್ಯಗಳನ್ನು ಆಯೋಜಿಸಿದ್ದು ಗ್ರಾಮದೇವತೆಗೆ ಎಸಗಿದ ಅಪಚಾರ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ. ಮುಂದೆ ಇಂತಹ ಘಟನೆಗಳು ಮತ್ತು ಅಶ್ಲೀಲ ಪ್ರದರ್ಶನಗಳು ನಡೆಯದಂತೆ ಆಡಳಿತ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಹಿರಿಯರು ಮತ್ತು ಯುವಕರು ಒತ್ತಾಯಿಸಿದ್ದಾರೆ.














Leave a Reply