ಹಾಸನ: ಹಾಸನ ಜಿಲ್ಲೆಯಲ್ಲಿ ರಾಜಕೀಯ ,ಟಾಕ್ ವಾರ್ ಆರಂಭ ಆಗಿದ್ದು ಸಂಸದ ಶ್ರೇಯಸ್ ಪಟೇಲ್ ಹಾಗೂ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ನಡುವಿನ ವಾಗ್ವಾದ ತೀವ್ರಗೊಂಡಿದೆ.
ಹಾಸನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್, ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಾಸನ ಜಿಲ್ಲೆಯ ಕೆಲ ಅಧಿಕಾರಿಗಳಿಗೆ ರೇವಣ್ಣ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. “ಅಧಿಕಾರಿಗಳ ಮೇಲೆ ಸುಮ್ಮನೆ ಹಕ್ಕುಚ್ಯುತಿ ಮಂಡನೆ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ. ರೇವಣ್ಣ ಅಧಿಕಾರದಲ್ಲಿದ್ದಾಗ ಅವರ ಕಾರ್ಯಶೈಲಿಯನ್ನು ನಾವು ನೋಡಿದ್ದೇವೆ,” ಎಂದು ಹೇಳಿದರು.
ಪ್ರಾಮಾಣಿಕ ಅಧಿಕಾರಿಗಳಿಗೆ ಸಹಕಾರ ನೀಡಬೇಕು ಎಂಬುದು ತಮ್ಮ ಅಭಿಪ್ರಾಯ ಎಂದು ತಿಳಿಸಿದ ಅವರು, “ಅಧಿಕಾರಿಗಳು ಕಾಂಗ್ರೆಸ್ ಏಜೆಂಟ್ಗಳಂತೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳುವುದಾದರೆ, ಅದನ್ನು ರೇವಣ್ಣ ಆತ್ಮಾವಲೋಕನ ಮಾಡಿಕೊಳ್ಳಬೇಕು,” ಎಂದು ಟೀಕಿಸಿದರು.
ಇದೇ ವೇಳೆ ಹೊಳೆನರಸೀಪುರದ ಲಕ್ಷ್ಮೀ ನರಸಿಂಹ ದೇವಸ್ಥಾನ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, “ದೇವಸ್ಥಾನ ಯಾರೊಬ್ಬರ ವೈಯಕ್ತಿಕ ಸ್ವತ್ತಲ್ಲ. ಪ್ರಧಾನಿಯಿಂದ ಹಿಡಿದು ಸಿಎಂ ಹಾಗೂ ಮಂತ್ರಿಗಳವರೆಗೆ ಅಧಿಕಾರ ಅನುಭವಿಸಿದವರು ದೇವಸ್ಥಾನದ ಅಭಿವೃದ್ಧಿಗೆ ಒಳ್ಳೆಯ ಕೆಲಸ ಮಾಡಬೇಕು,” ಎಂದರು.
ಅಧಿಕಾರಿಗಳ ಸಭೆ ವಿಚಾರದಲ್ಲಿ ಸ್ಪಷ್ಟನೆ ನೀಡಿದ ಪಟೇಲ್, “ಮೊದಲ ಬಾರಿ ಸಭೆ ಕರೆದವರು ರೇವಣ್ಣ, ನಾನು ಅಲ್ಲ. ನಾನು ದೇವರಿಗೆ ಬಟ್ಟೆ ಹೊದಿಸಲು ಎರಡು ಲಕ್ಷ ರೂ. ನೀಡಿದ್ದೇನೆ. ಇದೇ ಕಾರಣಕ್ಕೆ ಅಧಿಕಾರಿಗಳನ್ನು ಏಕವಚನದಲ್ಲಿ ಬೈದಿದ್ದಾರೆ,” ಎಂದು ಆರೋಪಿಸಿದರು.
ಈ ಬೆಳವಣಿಗೆ ಹಾಸನ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಇಬ್ಬರು ನಾಯಕರ ನಡುವಿನ ವಾಗ್ವಾದ ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ಶಾಸಕ ರೇವಣ್ಣ ಹಾಗೂ ಸಂಸದ ಶ್ರೇಯಸ್ ಪಟೇಲ್ ನಡುವೆ ಟಾಕ್ ವಾರ್











Leave a Reply