ಕಾಂಗ್ರೆಸ್ ಬಜೆಟ್ ಕೇವಲ ಅಂಕಿ-ಅಂಶಗಳ ಮಾಯಾಜಾಲ; ಯುವಜನತೆಗೆ ‘ಶೂನ್ಯ’ ಭಾಗ್ಯ: ಸಂತೋಷ್ ಕೋಟ್ಯಾನ್

Spread the love

 

 

ಚಿಕ್ಕಮಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮಂಡಿಸಿರುವ ಬಜೆಟ್ ಕೇವಲ ಅಂಕಿ-ಅಂಶಗಳ ಮಾಯಾಜಾಲವಾಗಿದ್ದು, ಯುವಜನತೆಗೆ ಸಂಪೂರ್ಣ ನಿರಾಸೆ ಮೂಡಿಸಿದೆ ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಜಿಲ್ಲಾ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಅವರು, ಪ್ರಸಕ್ತ ಬಜೆಟ್ ಕೇವಲ ಚುನಾವಣಾ ಗಿಮಿಕ್ ಆಗಿದ್ದು, ರಾಜ್ಯದ ಯುವಜನತೆಯ ಪಾಲಿಗೆ ಶೂನ್ಯ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ. ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದರೂ ಹೊಸ ಉದ್ಯೋಗ ಸೃಷ್ಟಿಯ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಸ್ಪಷ್ಟ ದಿಕ್ಸೂಚಿ ಇಲ್ಲದಿರುವುದು ಯುವಜನತೆಗೆ ಮಾಡಿದ ವಂಚನೆಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

​ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಯುವಜನಸ್ನೇಹಿ ಯೋಜನೆಗಳಿಗೆ ಈ ಸರ್ಕಾರ ಎಳ್ಳು-ನೀರು ಬಿಟ್ಟಿದೆ ಎಂದು ಆರೋಪಿಸಿರುವ ಅವರು, ಕೇವಲ ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಖಾಲಿ ಮಾಡುತ್ತಿರುವ ಸರ್ಕಾರ ಮೂಲಸೌಕರ್ಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತಿದೆ ಎಂದು ದೂರಿದ್ದಾರೆ. ವಿಶೇಷವಾಗಿ ಚಿಕ್ಕಮಗಳೂರು ಜಿಲ್ಲೆಯ ನೀರಾವರಿ, ರಸ್ತೆ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಯಾವುದೇ ವಿಶೇಷ ಅನುದಾನ ಮೀಸಲಿಡದಿರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ. ಅಭಿವೃದ್ಧಿ ಶೂನ್ಯ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳು ರಾಜ್ಯವನ್ನು ಸಾಲದ ಸುಳಿಗೆ ದೂಡುತ್ತಿದ್ದು, ಇದು ಮುಂದಿನ ಪೀಳಿಗೆಯ ಮೇಲೆ ದೊಡ್ಡ ಆರ್ಥಿಕ ಹೊರೆಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *