ಚಿಕ್ಕಮಗಳೂರು: ಕಷ್ಟಪಟ್ಟು ಬೆಳೆದಿದ್ದ ಬೆಳೆ ಕೈಗೆ ಬರುವ ಸಮಯದಲ್ಲೇ ಕಿಡಿಗೇಡಿಗಳು ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ. ತಾಲೂಕಿನ ಡಿ. ಕಾರೆಹಳ್ಳಿ ಕಾಲೊನಿಯ ರೈತ ಚಂದ್ರಪ್ಪ ಎಂಬುವವರ ಜಮೀನಿನಲ್ಲಿ ಬೆಳೆದಿದ್ದ ಸಾವಿರಾರು ಬಾಳೆ ಗಿಡಗಳನ್ನು ದುಷ್ಕರ್ಮಿಗಳು ರಾತ್ರೋರಾತ್ರಿ ಕಡಿದು ಹಾಕಿ ವಿಕೃತಿ ಮೆರೆದಿದ್ದಾರೆ.
ರೈತ ಚಂದ್ರಪ್ಪ ಅವರು ಸಾಲ ಮಾಡಿ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಅತ್ಯಂತ ಪ್ರೀತಿಯಿಂದ ಬಾಳೆ ಕೃಷಿ ಮಾಡಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ಬಾಳೆ ಗೊನೆ ಹೊಡೆಯುವ ಹಂತಕ್ಕೆ ಬಂದಿತ್ತು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತನಿಗೆ ಇಂದು ಬೆಳಗ್ಗೆ ಆಘಾತ ಕಾದಿತ್ತು. ಎಂದಿನಂತೆ ತೋಟಕ್ಕೆ ಹೋದಾಗ ಸಾವಿರಾರು ಬಾಳೆ ಗಿಡಗಳು ನೆಲಕ್ಕುರುಳಿರುವುದನ್ನು ಕಂಡು ರೈತ ಕಣ್ಣೀರು ಹಾಕಿದ್ದಾರೆ.
ಬಹಳಷ್ಟು ಶ್ರಮ ವಹಿಸಿ, ಸಾಲ-ಸೋಲ ಮಾಡಿ ಈ ಬೆಳೆ ಬೆಳೆಯಲಾಗಿತ್ತು. ಆದರೆ ಯಾರೋ ಕಿಡಿಗೇಡಿಗಳು ಹಗೆತನ ಸಾಧಿಸಲು ಈ ರೀತಿ ಬೆಳೆ ನಾಶ ಮಾಡಿರುವುದು ರೈತನ ಬದುಕನ್ನೇ ಬೀದಿಗೆ ತಂದಂತಾಗಿದೆ. ಫಸಲು ಬರುವ ಹಂತದಲ್ಲಿದ್ದ ಬೆಳೆ ನಾಶವಾಗಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳೀಯರು ಹಾಗೂ ಸಂತ್ರಸ್ತ ರೈತರು ಕಿಡಿಗೇಡಿಗಳನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದ್ದಾರೆ.
















Leave a Reply