ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದ ಏಕಲವ್ಯ ವಸತಿ ಶಾಲೆಯಲ್ಲಿ 7 ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಥಳಿತ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಬೆಳಗ್ಗೆ ಶಾಲಾ ಮೈದಾನದಲ್ಲಿ ಅನುಮತಿ ಪಡೆಯದೆ ಆಟವಾಡುತ್ತಿದ್ದ 7 ವಿದ್ಯಾರ್ಥಿಗಳನ್ನು ಪ್ರಿನ್ಸಿಪಲ್ ಮತ್ತು ಸಿಬ್ಬಂದಿ ಗದರಿಸಿ, ನಂತರ ಪ್ಲಾಸ್ಟಿಕ್ ಪೈಪ್ ಮತ್ತು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಕೈ-ಕಾಲುಗಳಿಗೆ ಗಾಯಗಳಾಗಿದ್ದು, ಬಾಸುಂಡೆಗಳು ಉಂಟಾಗಿವೆ ಎಂದು ತಿಳಿದುಬಂದಿದೆ.
ಇದಲ್ಲದೆ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ನಂತರ ಅವರನ್ನು ವಸತಿ ಶಾಲೆಯ ಒಂದು ಕೊಠಡಿಯಲ್ಲಿ ಕೂಡಿ ಹಾಕಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ರಾತ್ರಿ ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆಯ ಹಿನ್ನೆಲೆ ಬೆಳಗಿನ ಘಟನೆಗೆ ಕಾರಣವೆಂದು ಹೇಳಲಾಗಿದೆ.
ವಿದ್ಯಾರ್ಥಿಗಳ ಕೂಗಾಟ ಕೇಳಿದ ಸಮೀಪದ ಕಾಫಿ ತೋಟದ ಕಾರ್ಮಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಬಣಕಲ್ ಪೊಲೀಸರು, ಕೊಠಡಿಯಲ್ಲಿ ಇದ್ದ 7 ವಿದ್ಯಾರ್ಥಿಗಳನ್ನು ರಕ್ಷಿಸಿ ವಿಚಾರಣೆ ನಡೆಸಿದರು.
ಗಾಯಗೊಂಡ ವಿದ್ಯಾರ್ಥಿಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ವಿದ್ಯಾರ್ಥಿಗಳ ಹೇಳಿಕೆಯ ಪ್ರಕಾರ, ಶಾಲೆಯ ಪ್ರಿನ್ಸಿಪಲ್ ಸತೀಶ್ ಹಾಗೂ ಸಿಬ್ಬಂದಿ ಶುಭಮ್ ಅವರೇ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.













Leave a Reply