🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ರಾತ್ರಿ ಗಲಾಟೆ, ಬೆಳಗ್ಗೆ ಹೆದರಿ ಊರಿನತ್ತ ಹೆಜ್ಜೆ ಹಾಕಿದ ವಾಲ್ಮೀಕಿ ವಸತಿ ಶಾಲೆಯ ವಿದ್ಯಾರ್ಥಿಗಳು!

---Advertisement---

 

ಚಿಕ್ಕಮಗಳೂರು: ತಾಲೂಕಿನ ತುಡುಕೂರು ಗ್ರಾಮದಲ್ಲಿರುವ ಶ್ರೀ ಮಹರ್ಷಿ ವಾಲ್ಮಿಕಿ ವಸತಿ ಶಾಲೆಯಿಂದ ನಾಲ್ವರು ಪುಟ್ಟ ಮಕ್ಕಳು ಯಾರಿಗೂ ತಿಳಿಸದಂತೆ ಹೊರಬಂದಿರುವ ಆತಂಕಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ರಾತ್ರಿ ವಸತಿ ಶಾಲೆಯಲ್ಲಿ ಮಕ್ಕಳ ನಡುವೆ ನಡೆದ ಗಲಾಟೆಯಿಂದ ತೀವ್ರ ಭಯಗೊಂಡಿದ್ದ ಈ ನಾಲ್ವರು ವಿದ್ಯಾರ್ಥಿಗಳು, ಬೆಳ್ಳಂಬೆಳಗ್ಗೆ ತಮ್ಮ ಊರುಗಳಿಗೆ ಮರಳಲು ಬ್ಯಾಗ್ ಸಮೇತ ಹಾಸ್ಟೆಲ್ ಬಿಟ್ಟು ಹೊರಟಿದ್ದಾರೆ.
ಮೂಲತಃ ಉತ್ತರ ಕರ್ನಾಟಕದವರಾದ ಈ ಪುಟ್ಟ ಮಕ್ಕಳು ಹಾಸ್ಟೆಲ್‌ನಿಂದ ಯಾರಿಗೂ ತಿಳಿಯದಂತೆ ಹೊರಬಂದು, ಸುಮಾರು 2 ಕಿಲೋಮೀಟರ್‌ನಷ್ಟು ದೂರ ಚಿಕ್ಕಮಗಳೂರು ನಗರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂಟಿಯಾಗಿ ಹೋಗುತ್ತಿದ್ದ ಮಕ್ಕಳನ್ನು ಕಂಡು ಅನುಮಾನಗೊಂಡ ಸ್ಥಳೀಯರು ಅವರನ್ನು ತಡೆದು ವಿಚಾರಿಸಿದಾಗ ಇಡೀ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಜಾಗರೂಕರಾದ ಸಾರ್ವಜನಿಕರು ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಹಾಸ್ಟೆಲ್‌ಗೆ ಕರೆತಂದು ಒಪ್ಪಿಸಿದ್ದಾರೆ.
ಆದರೆ, ಪುಟ್ಟ ಮಕ್ಕಳು ಅಷ್ಟು ದೂರ ಬ್ಯಾಗ್ ಹೆಗಲಿಗೇರಿಸಿಕೊಂಡು ನಡೆದು ಬಂದಿದ್ದರೂ ವಸತಿ ಶಾಲೆಯ ಅಧಿಕಾರಿಗಳು, ವಾರ್ಡನ್ ಅಥವಾ ಅಲ್ಲಿನ ಭದ್ರತಾ ಸಿಬ್ಬಂದಿ ಗಮನಿಸದೇ ಇರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಈ ವಸತಿ ಶಾಲೆಯಲ್ಲಿನ ಭದ್ರತಾ ಲೋಪ ಹಾಗೂ ಅವ್ಯವಸ್ಥೆಯನ್ನು ಈ ಘಟನೆ ಎತ್ತಿ ತೋರಿಸಿದೆ. ಸ್ಥಳೀಯರು ಸಮಯ ಪ್ರಜ್ಞೆ ಮೆರೆದು ಮಕ್ಕಳನ್ನು ರಕ್ಷಿಸಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಒಂದು ವೇಳೆ ಮಕ್ಕಳು ಸಿಗದೇ ಹೋಗಿದ್ದರೆ ಅವರ ಪರಿಸ್ಥಿತಿ ಏನಾಗುತ್ತಿತ್ತು ಮತ್ತು ಅದಕ್ಕೆ ಯಾರು ಹೊಣೆಯಾಗುತ್ತಿದ್ದರು ಎಂದು ಪ್ರಶ್ನಿಸಿರುವ ಗ್ರಾಮಸ್ಥರು, ಹಾಸ್ಟೆಲ್ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Join WhatsApp

Join Now

Join Telegram

Join Now