ಬೇಲೂರು ತಾಲ್ಲೂಕಿನ ನೆಟ್ಟೆಕೆರೆ ಗ್ರಾಮದಲ್ಲಿ ಎಂಸ್ಯಾಂಡ್ ಅನ್ಲೋಡ್ ಮಾಡುತ್ತಿದ್ದ ವೇಳೆ, ಟಿಪ್ಪರ್ ಲಾರಿ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಹೊಳೆನರಸೀಪುರ ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ನಿವಾಸಿ ದಿಲೀಪ (33) ಎಂದು ಗುರುತಿಸಲಾಗಿದೆ.
ಮೃತ ಚಾಲಕ ದಿಲೀಪ ಅವರು, ಮಾಜಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜುನಾಥ್ ಎಂಬುವವರ ಮನೆಗೆ ಎಂಸ್ಯಾಂಡ್ ಸಾಗಿಸುತ್ತಿದ್ದರು. ಮನೆಯ ಬಳಿ ಇರುವ ವಿದ್ಯುತ್ ತಂತಿಗಳ ಬಗ್ಗೆ ಮೊದಲೇ ಅರಿವಿದ್ದ ಚಾಲಕ, ಲಾರಿಯನ್ನು ಆ ಜಾಗಕ್ಕೆ ತರಲು ಹಿಂದೇಟು ಹಾಕಿದ್ದರು. ಈ ಸ್ಥಳವು ಅಪಾಯಕಾರಿ ಎಂದು ಅವರು ತಿಳಿಸಿದ್ದರು.
ಆದರೆ, “ಈ ಹಿಂದೆ ಕೂಡ ಬೇರೆ ವಾಹನಗಳು ಇಲ್ಲಿ ಬಂದಿವೆ, ಯಾವುದೇ ಭಯವಿಲ್ಲ, ಮನೆಯ ಎದುರಿಗೆ ಅನ್ಲೋಡ್ ಮಾಡು” ಎಂದು ಮಾಜಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ್ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಮಾಲೀಕರ ಮಾತಿಗೆ ಮನ್ನಣೆ ನೀಡಿ ಲಾರಿಯನ್ನು ಅನ್ಲೋಡ್ ಮಾಡುವಾಗ, ಟಿಪ್ಪರ್ನ ಮೇಲ್ಭಾಗವು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಚಾಲಕ ದಿಲೀಪ ಲಾರಿಯ ಒಳಗೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಬೇಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯದ ಆರೋಪದ ಮೇರೆಗೆ ಮಂಜುನಾಥ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮ ಜರುಗಿಸುತ್ತಿದ್ದಾರೆ. ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
















Leave a Reply