Galleries

  • ಭದ್ರಾ ಬಲದಂಡೆ ನಾಲೆಯ ಸೇತುವೆಯಿಂದ ಹಾರಿ ಆಂಧ್ರ ಮೂಲದ ಯುವಕ ಆತ್ಮಹತ್ಯೆ!

    ಭದ್ರಾ ಬಲದಂಡೆ ನಾಲೆಯ ಸೇತುವೆಯಿಂದ ಹಾರಿ ಆಂಧ್ರ ಮೂಲದ ಯುವಕ ಆತ್ಮಹತ್ಯೆ!

     

     

     

    ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದ ಬಳಿ ಹೃದಯವಿದ್ರಾವಕ ಘಟನೆಯೊಂದು ಸಂಭವಿಸಿದ್ದು, ಆಂಧ್ರಪ್ರದೇಶ ಮೂಲದ ವಿನಯ್ ರೆಡ್ಡಿ ಎಂಬ 26 ವರ್ಷದ ಯುವಕ ಭದ್ರಾ ಬಲದಂಡೆ ನಾಲೆಯ ಸೇತುವೆಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ. ಭೋಪಾಲ್ ಮೂಲದ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಇವರು, ಭದ್ರಾ ಜಲಾಶಯದಿಂದ ಚಿತ್ರದುರ್ಗಕ್ಕೆ ನೀರು ಪೂರೈಸುವ ಯೋಜನೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಸುಂದರ ಭವಿಷ್ಯವನ್ನು ಹೊಂದಿದ್ದ ಈ ಯುವಕನ ದಿಢೀರ್ ಸಾವಿಗೆ ಕೌಟುಂಬಿಕ ಸಮಸ್ಯೆಗಳೇ ಕಾರಣವಿರಬಹುದು ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.

    ​ಸೇತುವೆಯಿಂದ ಹಾರಿದ ಯುವಕನಿಗಾಗಿ ನಾಲೆಯ ನೀರಿನಲ್ಲಿ ತೀವ್ರ ಶೋಧ ನಡೆಸಲಾಗಿದ್ದು, ಕೊನೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪ್ರಸಿದ್ಧ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ತಂಡವು ಶವವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಯುವಕ ಅಕಾಲಿಕವಾಗಿ ಸಾವನ್ನಪ್ಪಿರುವುದು ಕುಟುಂಬದವರಲ್ಲಿ ಮತ್ತು ಸಹೋದ್ಯೋಗಿಗಳಲ್ಲಿ ಕತ್ತಲು ಕವಿಯುವಂತೆ ಮಾಡಿದೆ. ಸದ್ಯ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮರಣದ ಹಿಂದಿನ ನಿಖರ ಕಾರಣಗಳ ತನಿಖೆಯಲ್ಲಿ ತೊಡಗಿದ್ದಾರೆ.

  • ವಾಕಿಂಗ್ ತೆರಳಿದ್ದ ವೃದ್ಧನಿಗೆ ಡಿಕ್ಕಿ ಹೊಡೆದು ವಾಹನ ಪರಾರಿ

    ವಾಕಿಂಗ್ ತೆರಳಿದ್ದ ವೃದ್ಧನಿಗೆ ಡಿಕ್ಕಿ ಹೊಡೆದು ವಾಹನ ಪರಾರಿ

     

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ತಿಲಕ್ ರಸ್ತೆಯಲ್ಲಿ ಇಂದು ಮುಂಜಾನೆ ‘ಹಿಟ್ ಅಂಡ್ ರನ್’ ಘಟನೆ ನಡೆದಿದೆ. ಎಂದಿನಂತೆ ಮುಂಜಾನೆ ವಾಕಿಂಗ್‌ಗೆ ತೆರಳಿದ್ದ 67 ವರ್ಷದ ಈಶ್ವರ ಎಂಬುವವರಿಗೆ ಅಪರಿಚಿತ ವಾಹನವೊಂದು ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಈಶ್ವರ ಅವರು ರಸ್ತೆಯಲ್ಲೇ ಬಿದ್ದಿದ್ದು, ಅಪರಿಚಿತ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
    ​ರಸ್ತೆಯಲ್ಲಿ ತೀವ್ರವಾಗಿ ಗಾಯಗೊಂಡು ನರಳುತ್ತಿದ್ದ ವೃದ್ಧನನ್ನು ಗಮನಿಸಿದ ಸ್ಥಳೀಯ ಶಿಕ್ಷಕರೊಬ್ಬರು ತಕ್ಷಣವೇ ಮಾನವೀಯತೆ ಮೆರೆದಿದ್ದಾರೆ. ಆಟೋ ಚಾಲಕನ ನೆರವಿನೊಂದಿಗೆ ಗಾಯಾಳುವನ್ನು ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಈಶ್ವರ ಅವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದ್ದು, ಸದ್ಯ ಅವರನ್ನು ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ

  • ಕಾಡುಕೋಣ ದಾಳಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಧೈರ್ಯ ತುಂಬಿದ ಜೀವರಾಜ್

    ಕಾಡುಕೋಣ ದಾಳಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಧೈರ್ಯ ತುಂಬಿದ ಜೀವರಾಜ್

     

    ಕೊಪ್ಪ : ತಾಲೂಕಿನ ಮುಂಡೋಳಲು ಗ್ರಾಮದಲ್ಲಿ ಕಾಡುಕೋಣದ ದಾಳಿಗೆ ತುತ್ತಾಗಿ ಆಸ್ಪತ್ರೆ ಸೇರಿರುವ ಶಿವಪ್ಪ ಅವರ ಆರೋಗ್ಯ ಸ್ಥಿತಿಯನ್ನು ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಪ್ಪ ಅವರಿಗೆ ಧೈರ್ಯ ತುಂಬಿದ ಅವರು, ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಚಿಕಿತ್ಸೆ ನೀಡುವಂತೆ ತಿಳಿಸಿದರು. ಈ ಸಂಕಷ್ಟದ ಸಮಯದಲ್ಲಿ ಕುಟುಂಬದವರೊಂದಿಗೆ ನಾವಿದ್ದೇವೆ ಎಂಬ ಭರವಸೆ ನೀಡಿದ ಮಾಜಿ ಸಚಿವರು, ಗಾಯಾಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದರು.
    ​ಇದೇ ವೇಳೆ ಘಟನೆಯ ತೀವ್ರತೆಯನ್ನು ಕಂಡು ಆಕ್ರೋಶ ವ್ಯಕ್ತಪಡಿಸಿದ ಡಿ.ಎನ್. ಜೀವರಾಜ್, ಕೂಡಲೇ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (DFO) ಕರೆ ಮಾಡಿ ಅಧಿಕಾರಿಗಳ ವಿಳಂಬ ಧೋರಣೆಯನ್ನು ಖಂಡಿಸಿದರು. ಮಲೆನಾಡು ಭಾಗದಲ್ಲಿ ಕಾಡುಪ್ರಾಣಿಗಳ ಉಪಟಳ ಮಿತಿಮೀರಿದ್ದು, ಜನರು ತೋಟ-ಗದ್ದೆಗಳಿಗೆ ಹೋಗಲು ಭಯಪಡುವಂತಾಗಿದೆ ಎಂದು ಅಧಿಕಾರಿಗಳ ಗಮನ ಸೆಳೆದರು. ದಾಳಿಗೆ ಒಳಗಾದ ಶಿವಪ್ಪ ಅವರಿಗೆ ಅರಣ್ಯ ಇಲಾಖೆಯಿಂದ ಸಿಗಬೇಕಾದ ಗರಿಷ್ಠ ಪರಿಹಾರವನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಮಂಜೂರು ಮಾಡಬೇಕು ಎಂದು ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು

  • ಚಿಕ್ಕಮಗಳೂರಿನ ಇಬ್ಬರು ಪೊಲೀಸರಿಗೆ ಪ್ರತಿಷ್ಠಿತ “ಮುಖ್ಯಮಂತ್ರಿ ಪದಕ” ಗೌರವ

    ಚಿಕ್ಕಮಗಳೂರಿನ ಇಬ್ಬರು ಪೊಲೀಸರಿಗೆ ಪ್ರತಿಷ್ಠಿತ “ಮುಖ್ಯಮಂತ್ರಿ ಪದಕ” ಗೌರವ

     

     

    ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಅತ್ಯುನ್ನತ ಸೇವೆ ಮತ್ತು ಪ್ರಾಮಾಣಿಕತೆಯನ್ನು ಗುರುತಿಸಿ ನೀಡಲಾಗುವ 2025ನೇ ಸಾಲಿನ ಪ್ರತಿಷ್ಠಿತ “ಮುಖ್ಯಮಂತ್ರಿ ಪದಕ”ಕ್ಕೆ ಚಿಕ್ಕಮಗಳೂರು ಜಿಲ್ಲೆಯ ಇಬ್ಬರು ಪೊಲೀಸರು ಆಯ್ಕೆಯಾಗುವ ಮೂಲಕ ಕಾಫಿನಾಡಿಗೆ ಹೆಮ್ಮೆ ತಂದಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶೈಲಕುಮಾರ್ ಜೆ. ಮತ್ತು ಜಿಲ್ಲಾ ಸಿಆರ್ಇ ಪೊಲೀಸ್ ಠಾಣೆಯ ಸಿ.ಹೆಚ್.ಸಿ. ಆಗಿ ಸೇವೆ ಸಲ್ಲಿಸುತ್ತಿರುವ ಗಿರೀಶ್ ಟಿ. ಎಸ್. ಅವರು ಈ ಗೌರವಕ್ಕೆ ಪಾತ್ರರಾದ ಸಾಧಕರಾಗಿದ್ದಾರೆ.

    ​ಸಾರ್ವಜನಿಕ ಸೇವೆ, ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಹಾಗೂ ಇಲಾಖೆಯಲ್ಲಿ ತೋರಿದ ಅಪ್ರತಿಮ ಕರ್ತವ್ಯನಿಷ್ಠೆಯನ್ನು ಪರಿಗಣಿಸಿ ರಾಜ್ಯ ಸರ್ಕಾರವು ಇವರ ಹೆಸರನ್ನು ಈ ಪ್ರಶಸ್ತಿಗೆ ಅಂತಿಮಗೊಳಿಸಿದೆ. ಈ ಸಾಧನೆಯು ಜಿಲ್ಲಾ ಪೊಲೀಸ್ ಇಲಾಖೆಯ ಘನತೆಯನ್ನು ಹೆಚ್ಚಿಸಿದ್ದು, ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಪದಕ ವಿಜೇತ ಈ ಇಬ್ಬರು ಅಧಿಕಾರಿಗಳಿಗೆ ಬೆಂಗಳೂರಿನಲ್ಲಿ ಏಪ್ರಿಲ್ 2 ರಂದು ವೈಭವವಾಗಿ ನಡೆಯಲಿರುವ “ಪೊಲೀಸ್ ಧ್ವಜ ದಿನಾಚರಣೆ” ಕಾರ್ಯಕ್ರಮದಲ್ಲಿ ಪದಕ ನೀಡಿ ಸನ್ಮಾನಿಸಲಾಗುವುದು.

  • ನಗರದ ಹೊರವಲಯದ ಮರ್ಲೆ ಕಲ್ಲು ಕ್ವಾರಿ ಬಳಿ ಹುಲಿ ಓಡಾಟ ಗ್ರಾಮಸ್ಥರಲ್ಲಿ ಆತಂಕ

    ನಗರದ ಹೊರವಲಯದ ಮರ್ಲೆ ಕಲ್ಲು ಕ್ವಾರಿ ಬಳಿ ಹುಲಿ ಓಡಾಟ ಗ್ರಾಮಸ್ಥರಲ್ಲಿ ಆತಂಕ

     

     

    ನಗರದ ಹೊರವಲಯದ ವಲಯ ಮರ್ಲೆ ಗ್ರಾಮದ ಸಮೀಪದ ಕಲ್ಲು ಕ್ವಾರಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯೊಂದು ಓಡಾಡುತ್ತಿರುವುದು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿಯಲಾಗಿದೆ.

     ಈ ಘಟನೆ ಮರ್ಲೆ, ಕಳಸಾಪುರ ಹಾಗೂ ನಾಗರಹಳ್ಳಿ ಗ್ರಾಮಗಳ ಜನರಲ್ಲಿ ಭಯ ಹುಟ್ಟಿಸಿದೆ.

    ಹುಲಿ ಕಲ್ಲು ಕ್ವಾರಿ ಪ್ರದೇಶ ಸೇರಿದಂತೆ ಸುತ್ತಲಿನ ಜಾಗಗಳಲ್ಲಿ ಸಂಚರಿಸುತ್ತಿರುವುದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಅರಣ್ಯ ಇಲಾಖೆ ಸೂಚನೆ ನೀಡಿದೆ. ವಿಶೇಷವಾಗಿ ರಾತ್ರಿ ವೇಳೆ ಅನಾವಶ್ಯಕವಾಗಿ ಹೊರಗೆ ಹೋಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

    ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಹುಲಿಯ ಚಲನವಲನಗಳ ಮೇಲೆ ನಿಗಾ ವಹಿಸಲಾಗಿದೆ. ಜನರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

  • ತರೀಕೆರೆ: ರಸ್ತೆಯಲ್ಲೇ 2 ಕಿ.ಮೀ ಓಡಿದ ಕರಡಿ;

    ತರೀಕೆರೆ: ರಸ್ತೆಯಲ್ಲೇ 2 ಕಿ.ಮೀ ಓಡಿದ ಕರಡಿ;

     

    ​ಲಕ್ಕವಳ್ಳಿ: ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಸುತ್ತಮುತ್ತಲ ಪ್ರದೇಶದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸುಮಾರು ಎರಡು ಕಿಲೋಮೀಟರ್‌ಗಳಿಗೂ ಹೆಚ್ಚು ಕಾಲ ರಾಜ್ಯ ಹೆದ್ದಾರಿಯಲ್ಲಿ ಓಡಿದ ಕರಡಿ, ಬೈಕ್ ಸವಾರರು ಹಾಗೂ ಹಳ್ಳಿಗರನ್ನು ಬೆಚ್ಚಿಬೀಳಿಸಿದೆ.

    ​ತರೀಕೆರೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಈ ಕರಡಿ, ಕುವೆಂಪು ವಿಶ್ವವಿದ್ಯಾನಿಲಯದ ಹತ್ತಿರದ ಲಕ್ಕವಳ್ಳಿ ಗ್ರಾಮದ ಬಳಿ ಜನನಿಬಿಡ ರಸ್ತೆಯಲ್ಲೇ ಓಡಿದೆ. ಸುಮಾರು 2 ಕಿ.ಮೀ ದೂರದವರೆಗೆ ರಸ್ತೆಯ ಮಧ್ಯೆಯೇ ಸಾಗಿದ ಕರಡಿಯನ್ನು ಕಂಡು ವಾಹನ ಸವಾರರು ಕಂಗಾಲಾಗಿದ್ದಾರೆ. ಅನಿವಾರ್ಯವಾಗಿ ಬೈಕ್ ಸವಾರರು ಭಯದಿಂದ ಹಾರನ್ ಮಾಡುತ್ತಾ ಕರಡಿಯನ್ನು ಓಡಿಸಲು ಪ್ರಯತ್ನಿಸುತ್ತಾ ಸಾಗಿದ್ದಾರೆ. ದಾರಿಹೊಕ್ಕರು ಈ ದೃಶ್ಯವನ್ನು ತಮ್ಮ ಮೊಬೈಲ್‌ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ

    ​ ಇನ್ನು  ಮನೆಯೊಂದರ ಬಾಗಿಲಲ್ಲೇ ಮಗುವೊಂದು ಆಟವಾಡುತ್ತಿತ್ತು. ಮಗುವಿನ ತೀರಾ ಹತ್ತಿರದಲ್ಲೇ ಸಾಗಿದ ಕರಡಿ, ಅದೃಷ್ಟವಶಾತ್ ಮಗುವಿಗೆ ಯಾವುದೇ ತೊಂದರೆ ನೀಡದೆ ಪಕ್ಕದಲ್ಲೇ ಹಾದು ಹೋಗಿದೆ. ಇದನ್ನು ಕಂಡ ಮನೆಯವರು ಹಾಗೂ ಗ್ರಾಮಸ್ಥರು ಒಂದು ಕ್ಷಣ ಸ್ತಬ್ಧರಾಗಿದ್ದರು.

    ​ಕರಡಿ ಗ್ರಾಮದೊಳಗೆ ಬರುತ್ತಿದ್ದಂತೆ ಸ್ಥಳೀಯ ನಾಯಿಗಳು ಅದರ ಮೇಲೆ ಬೊಗಳುತ್ತಾ ಅಟ್ಟಿಸಿಕೊಂಡು ಬಂದಿವೆ. ಈ ವೇಳೆ ತಿರುಗಿಬಿದ್ದ ಕರಡಿ, ನಾಯಿಗಳನ್ನೇ ಹೆದರಿಸಿ ಓಡಿಸಿ, ಬಳಿಕ ಅರಣ್ಯದ ಅಂಚಿನಲ್ಲಿ ಕಣ್ಮರೆಯಾಗಿದೆ

    ​ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಲಕ್ಕವಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಜನರು ಕರಡಿ ದಾಳಿಯ ಭೀತಿಯಲ್ಲಿ ಬದುಕುತ್ತಿದ್ದಾರೆ. “ಕರಡಿ ಜನವಸತಿ ಪ್ರದೇಶಕ್ಕೆ ನುಗ್ಗುತ್ತಿರುವುದು ಅಪಾಯಕಾರಿ. ಕೂಡಲೇ ಅರಣ್ಯ ಇಲಾಖೆ ಕಾರ್ಯಪ್ರವೃತ್ತರಾಗಿ ಕರಡಿಯನ್ನು ಸೆರೆಹಿಡಿದು ದೂರದ ಕಾಡಿಗೆ ಸ್ಥಳಾಂತರಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

  • ಆನ್ ಲೈನ್ ಟ್ರೇಡಿಂಗ್ ನಂಬಿ ಕೋಟಿ ಕೋಟಿ ಹಣ ಕಳೆದುಕೊಂಡ ಕಡೂರಿನ ವ್ಯಕ್ತಿ

    ಆನ್ ಲೈನ್ ಟ್ರೇಡಿಂಗ್ ನಂಬಿ ಕೋಟಿ ಕೋಟಿ ಹಣ ಕಳೆದುಕೊಂಡ ಕಡೂರಿನ ವ್ಯಕ್ತಿ

     

    ​ಚಿಕ್ಕಮಗಳೂರು: ಆನ್‌ಲೈನ್ ಟ್ರೇಡಿಂಗ್ ಮೂಲಕ ಅಲ್ಪ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಆಸೆಗೆ ಬಿದ್ದ ವ್ಯಕ್ತಿಯೊಬ್ಬರು ಬರೋಬ್ಬರಿ 1.28 ಕೋಟಿ ರೂಪಾಯಿ ಹಣ ಕಳೆದುಕೊಂಡು ವಂಚನೆಗೊಳಗಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ನಡೆದಿದೆ.

    ಕಡೂರು ತಾಲೂಕಿನ ನಿವಾಸಿ ಕಲ್ಲೇಗೌಡ ಎಂಬುವವರೇ ವಂಚನೆಗೊಳಗಾದ ದುರ್ದೈವಿ. ಇವರು ಫೇಸ್‌ಬುಕ್‌ನಲ್ಲಿ ಕಂಡುಬಂದ ‘FYERS’ ಎಂಬ ಟ್ರೇಡಿಂಗ್ ಲಿಂಕ್ ಅನ್ನು ಕ್ಲಿಕ್ ಮಾಡಿದ್ದರು. ಈ ಮೂಲಕ ಇವರು ‘F8-FYERS ಸೆಕ್ಯೂರಿಟಿ ಗ್ರೂಪ್’ ಎಂಬ ವಾಟ್ಸಾಪ್ ಗುಂಪಿಗೆ ಸೇರ್ಪಡೆಯಾಗಿದ್ದರು. ಬಳಿಕ ವಂಚಕರು ನೀಡಿದ ‘QIB-iPO’ ಟ್ರೇಡಿಂಗ್ ಲಿಂಕ್‌ನಲ್ಲಿ ಖಾತೆ ತೆರೆದಿದ್ದರು.ಆರಂಭದಲ್ಲಿ ಕಲ್ಲೇಗೌಡ ಅವರು 60 ಸಾವಿರ ರೂಪಾಯಿ ಹೂಡಿಕೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ವಂಚಕರು ಲಾಭದ ಹಣ ಎಂದು ಬಿಂಬಿಸಿ 17,800 ರೂಪಾಯಿಗಳನ್ನು ಇವರ ಖಾತೆಗೆ ಜಮಾ ಮಾಡುವ ಮೂಲಕ ನಂಬಿಕೆ ಹುಟ್ಟಿಸಿದ್ದರು. ಹೆಚ್ಚಿನ ಲಾಭದ ಆಸೆಗೆ ಬಿದ್ದ ಕಲ್ಲೇಗೌಡ ಅವರು, ವಂಚಕರು ಹಂತ ಹಂತವಾಗಿ ಕೇಳಿದಾಗಲೆಲ್ಲಾ ಹಣವನ್ನು ವರ್ಗಾವಣೆ ಮಾಡಿದ್ದಾರೆ.

    ​ 1 ಕೋಟಿ 28 ಲಕ್ಷದ 10 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದ್ದ ಅವರು, ಅಪ್ಲಿಕೇಶನ್‌ನಲ್ಲಿ ತಮಗೆ ಬರುತ್ತಿದ್ದ ಲಾಭವನ್ನು ಕಂಡು ಸಂಭ್ರಮಿಸಿದ್ದರು. ಆದರೆ, ಹೂಡಿಕೆ ಮಾಡಿದ ಹಣ ಮತ್ತು ಬಂದ ಲಾಭವನ್ನು ಹಿಂಪಡೆಯಲು (Withdraw) ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ.

    ಹಲವು ಪ್ರಯತ್ನಗಳ ನಂತರವೂ ಹಣ ವಿತ್‌ಡ್ರಾ ಮಾಡಲು ಸಾಧ್ಯವಾಗದಿದ್ದಾಗ ಮತ್ತು ವಂಚಕರಿಂದ ಯಾವುದೇ ಸರಿಯಾದ ಪ್ರತಿಕ್ರಿಯೆ ಬಾರದಿದ್ದಾಗ ತಾನು ಮೋಸ ಹೋಗಿರುವುದು ಕಲ್ಲೇಗೌಡ ಅವರಿಗೆ ಅರಿವಾಗಿದೆ. ಕೂಡಲೇ ಅವರು ಚಿಕ್ಕಮಗಳೂರು ಸೆನ್ (CEN) ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಪ್ರಕರಣ ದಾಖಲಿಸಿದ್ದಾರೆ.

    ​ಸಾರ್ವಜನಿಕರು ಇಂತಹ ಅಪರಿಚಿತ ಆನ್‌ಲೈನ್ ಟ್ರೇಡಿಂಗ್ ಲಿಂಕ್‌ಗಳು ಹಾಗೂ ವಾಟ್ಸಾಪ್ ಗ್ರೂಪ್‌ಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

  • ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪ್ರವಾಸಿ ಕಾರು

    ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಪ್ರವಾಸಿ ಕಾರು

    ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೇಖಾನ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿ ಕಾರೊಂದು ರಸ್ತೆ ಬದಿಯ ಕಂದಕಕ್ಕೆ ಪಲ್ಟಿಯಾದ ಘಟನೆ ನಡೆದಿದೆ.

    ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದಿಂದ ಹೊರನಾಡಿಗೆ ತೆರಳುತ್ತಿದ್ದ ಈ ಕಾರು, ತೀವ್ರ ವೇಗ ಹಾಗೂ ನಿಯಂತ್ರಣ ತಪ್ಪಿದ ಕಾರಣ ಎರಡು ಬಾರಿ ಪಲ್ಟಿಯಾಗಿ ಕಂದಕಕ್ಕೆ ಬಿದ್ದಿದೆ. ಆದರೂ ಭಾರೀ ಅನಾಹುತ ತಪ್ಪಿದ್ದು, ಕಾರಿನಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

    ಕಾರಿನಲ್ಲಿದ್ದ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಾಳುಗಳನ್ನು ತಕ್ಷಣ ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

    ಘಟನೆ ತಿಳಿಯುತ್ತಿದ್ದಂತೆ ಕಳಸ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಕ್ರೇನ್ ಸಹಾಯದಿಂದ ಕಂದಕಕ್ಕೆ ಬಿದ್ದ ಕಾರನ್ನು ಮೇಲಕ್ಕೆ ಎತ್ತಲಾಯಿತು.

  • ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಫರ್ನಿಚರ್ ಅಂಗಡಿ

    ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಫರ್ನಿಚರ್ ಅಂಗಡಿ

     

    ಚಿಕ್ಕಮಗಳೂರು ನಗರದ ಐಜಿ ರಸ್ತೆಯಲ್ಲಿ ಇರುವ ಫರ್ನಿಚರ್ ಅಂಗಡಿಯಲ್ಲಿ ಅಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ವ್ಯಾಪಕವಾಗಿ ಹರಡಿದೆ. ಅಂಗಡಿಯಲ್ಲಿ ಸಂಗ್ರಹಿಸಿದ್ದ ಹಾಸಿಗೆ, ಬೀರು, ಕುಷನ್, ಸೋಫಾಸೆಟ್, ದಿವಾನ್ ಕಾಟ್ ಸೇರಿದಂತೆ ಬಹುತೇಕ ಫರ್ನಿಚರ್ ವಸ್ತುಗಳು ಬೆಂಕಿಗಾಹುತಿಯಾಗಿವೆ.

    ಸ್ಥಳೀಯರು ಹಾಗೂ ಅಂಗಡಿ ಮಾಲೀಕರು ಸಾಧ್ಯವಾದಷ್ಟು ವಸ್ತುಗಳನ್ನು ಹೊರತೆಗೆದು ರಸ್ತೆಗೆ ಇಡುವ ಮೂಲಕ ಹಾನಿಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಹಾಸಿಗೆ ಮತ್ತು ಕುಷನ್‌ಗಳಂತಹ ಸುಲಭವಾಗಿ ಹೊತ್ತಿ ಉರಿಯುವ ವಸ್ತುಗಳಿದ್ದ ಬೆಂಕಿ ವೇಗವಾಗಿ ವ್ಯಾಪಿಸಿದೆ.

    ಇಡೀ ರಾತ್ರಿ ಸಾಧಾರಣ ಮಳೆಯಾಗಿದ್ದ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಅನಾಹುತ ತಪ್ಪಿದಂತಾಗಿದೆ ಎಂದು ಹೇಳಲಾಗಿದೆ. ಮಾಹಿತಿ ಪಡೆದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.

    ಘಟನಾ ಸ್ಥಳದಲ್ಲಿ ಎರಡು ಅಗ್ನಿಶಾಮಕ ವಾಹನಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಸಂಪೂರ್ಣ ನಿಯಂತ್ರಣಕ್ಕೆ ತರಲಾಗಿದೆ. ಐಜಿ ರಸ್ತೆ ನಗರದಲ್ಲಿನ ಪ್ರಮುಖ ರಸ್ತೆ ಆಗಿರುವುದರಿಂದ ಕೆಲ ಕಾಲ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

  • ಹಾಸನ: ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿ ಕಾರು ಡಿಕ್ಕಿಯಾಗಿ ಸಾವು

    ಹಾಸನ: ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ವಿದ್ಯಾರ್ಥಿ ಕಾರು ಡಿಕ್ಕಿಯಾಗಿ ಸಾವು

    ಹೊಳೆನರಸೀಪುರ: ಶಾಲೆಯಲ್ಲಿ ವಾರ್ಷಿಕ ಪರೀಕ್ಷೆ ಮುಗಿಸಿ ಸಂತಸದಿಂದ ಮನೆಗೆ ಮರಳುತ್ತಿದ್ದ ಬಾಲಕನೊಬ್ಬ ಅತಿವೇಗವಾಗಿ ಬಂದ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಾಮಸಮುದ್ರ ಗ್ರಾಮದಲ್ಲಿ ನಡೆದಿದೆ.

    ​ಮೃತ ವಿದ್ಯಾರ್ಥಿಯನ್ನು ಕಾಮಸಮುದ್ರ ಗ್ರಾಮದ ಚಿರಂತ್ ಗೌಡ (14 ವರ್ಷ) ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು. ಇಂದು ಪರೀಕ್ಷೆ ಮುಗಿಸಿ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದಾಗ, ಚಾಲಕನ ಅಜಾಗರೂಕತೆಯಿಂದ ಬಂದ ಕಾರು ಬಾಲಕನಿಗೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಚಿರಂತ್ ಗೌಡ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

    ​ಚಾಲಕನ ಬೇಜವಾಬ್ದಾರಿಯೇ ಈ ಸಾವಿಗೆ ನೇರ ಕಾರಣ ಎಂದು ಮೃತ ಬಾಲಕನ ಪೋಷಕರು ಮತ್ತು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುದ್ದಿನ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು,