Galleries

  • ತೆರಿಗೆ‌ ಇಳಿಸಿದ್ರೆ ಖುಷಿ ಪಡೋ ವಿಚಾರ, ಆದರೆ, ಕಾಂಗ್ರೆಸ್ ಸಂಕಟ ಪಡುತ್ತಿದೆ  ಸಿ.ಟಿ.ರವಿ

    ತೆರಿಗೆ‌ ಇಳಿಸಿದ್ರೆ ಖುಷಿ ಪಡೋ ವಿಚಾರ, ಆದರೆ, ಕಾಂಗ್ರೆಸ್ ಸಂಕಟ ಪಡುತ್ತಿದೆ ಸಿ.ಟಿ.ರವಿ

    ಚಿಕ್ಕಮಗಳೂರು: ಇಂಧನ ತೆರಿಗೆ ಇಳಿಕೆ ಕುರಿತು ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ವೇಳೆ, ಕಾಂಗ್ರೆಸ್ ಪಕ್ಷದ ನಡೆಗೆ ಟೀಕೆಗಳು ಕೇಳಿಬರುತ್ತಿವೆ ಎಂದು ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.
    ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತೆರಿಗೆ ಇಳಿಕೆಯಿಂದ ಜನರು ಸಂತೋಷಗೊಂಡಿದ್ದಾರೆ. ಆದರೆ ಕಾಂಗ್ರೆಸ್ ಇದನ್ನು ಸ್ವಾಗತಿಸುವ ಬದಲು ಸಂಕಟಪಡುತ್ತಿರುವುದು ವಿಷಾದನೀಯ ಎಂದು ಹೇಳಿದರು. ಯುದ್ಧ ಪರಿಸ್ಥಿತಿಯ ಪರಿಣಾಮ ಜನಸಾಮಾನ್ಯರಿಗೆ ತಟ್ಟಬಾರದೆಂಬ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ತೆರಿಗೆ ಇಳಿಕೆ ಮಾಡಿದ್ದಾರೆ ಎಂದು ಹೇಳಿದರು.

    ಡಿಸಿಎಂ ಹಾಗೂ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಗಮನಿಸಿದ್ದೇನೆ. ಜನರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಅವರು ಈ ನಿರ್ಧಾರವನ್ನು ಸ್ವಾಗತಿಸಬೇಕಾಗಿತ್ತು. ಬೆಲೆ ಇಳಿದರೂ ವಿರೋಧಿಸುವುದು ಕಾಂಗ್ರೆಸ್‌ನ ನಿಲುವು ಎಂಬುದು ಸ್ಪಷ್ಟವಾಗುತ್ತದೆ. ಜನರಿಗೆ ಖುಷಿ ತಂದ ವಿಚಾರಗಳೇ ಕಾಂಗ್ರೆಸ್‌ಗೆ ಸಂಕಟವಾಗುತ್ತಿವೆ ಎಂದು ಟೀಕಿಸಿದರು.
    ಉಪಚುನಾವಣೆ ಫಲಿತಾಂಶಗಳ ಕುರಿತು ಮಾತನಾಡಿದ ಅವರು, ಉಪಚುನಾವಣೆಗಳು ತಕ್ಷಣ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಜನರ ಭಾವನೆಗಳನ್ನು ವ್ಯಕ್ತಪಡಿಸುವ ವೇದಿಕೆಯಾಗಿವೆ. ಕಾಂಗ್ರೆಸ್ ಸೋತರೆ ಸರ್ಕಾರ ಬೀಳುವುದಿಲ್ಲ, ಆದರೆ ಜನರಿಂದ ಒಂದು ಸ್ಪಷ್ಟ ಸಂದೇಶ ಹೋಗುತ್ತದೆ ಎಂದರು.
    ರಾಜ್ಯದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿಯ ಕೊರತೆ ಹಾಗೂ ಬೆಲೆ ಏರಿಕೆ ವಿಷಯಗಳಲ್ಲಿ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದರು.

  • ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಭಾರೀ ಮಳೆಯಿಂದ ಮೂಡಿಗೆರೆ ತಾಲೂಕಿನಾದ್ಯಂತ ನಾನಾ ಅವಾಂತರ

    ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಭಾರೀ ಮಳೆಯಿಂದ ಮೂಡಿಗೆರೆ ತಾಲೂಕಿನಾದ್ಯಂತ ನಾನಾ ಅವಾಂತರ

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಇಂದು ದಿಢೀರನೆ ಆರಂಭವಾದ ಭಾರೀ ಮಳೆ ಮತ್ತು ಗಾಳಿಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಾಫಿನಾಡು ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವೆಡೆ ಅನಾಹುತಗಳು ಸಂಭವಿಸಿವೆ.
    ಮೂಡಿಗೆರೆ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಗಾಳಿಯ ತೀವ್ರತೆಗೆ ರಸ್ತೆ ಬದಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ಕಾರು ಜಖಂಗೊಂಡಿದೆ. ಕಾರಿನೊಳಗೆ ಯಾರೂ ಇಲ್ಲದ ಕಾರಣ ದೊಡ್ಡ ಅಪಾಯ ತಪ್ಪಿದೆ.
    ಇನ್ನೂ ಹಲವೆಡೆ ಭಾರೀ ಗಾಳಿಯಿಂದ ತೆಂಗಿನ ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಒಂದು ಸ್ಥಳದಲ್ಲಿ ಬೃಹತ್ ತೆಂಗಿನ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದು ಅಪಾಯಕಾರಿಯಾಗಿ ನಿಂತಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
    ಮೂಡಿಗೆರೆ ಪಟ್ಟಣದ ಹೈಸ್ಕೂಲಿನ ಮೇಲ್ಛಾವಣಿಯ ಹೆಂಚುಗಳು ಗಾಳಿಯ ಬಿರುಗಾಳಿಗೆ ಹಾರಿ ಹೋಗಿವೆ. ಬಿದರಹಳ್ಳಿ ಗ್ರಾಮದಲ್ಲಿ ಗಾಳಿ-ಮಳೆಯ ಅಬ್ಬರಕ್ಕೆ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ಆಸ್ತಿ ನಷ್ಟ ಸಂಭವಿಸಿದೆ.
    ಪಟ್ಟಣದ ಹಲವೆಡೆ ಗಾಳಿ-ಮಳೆಯ ತೀವ್ರತೆಗೆ ವಾಹನಗಳು ನಿಂತಲ್ಲೇ ನಿಂತಿರುವ ದೃಶ್ಯ ಕಂಡುಬಂದಿದೆ. ಚಾರ್ಮಾಡಿ ಘಾಟ್ ತಪ್ಪಲಿನ ಕೊಟ್ಟಿಗೆಹಾರ ಭಾಗದಲ್ಲೂ ಭಾರೀ ಮಳೆ ಸುರಿಯುತ್ತಿದ್ದು, ಮಲೆನಾಡು ಪ್ರದೇಶದ ಜನತೆ ಕಂಗಾಲಾಗಿದ್ದಾರೆ.
     

  • ಸಿಬಿಐ ಅಧಿಕಾರಿ ಸೋಗಿನಲ್ಲಿ ಬೆದರಿಕೆ ಹಾಕಿ ವೃದ್ಧನಿಂದ ಲಕ್ಷಾಂತರ ರೂಪಾಯಿ ದೋಚಿದ ಸೈಬರ್ ವಂಚಕರು

    ಸಿಬಿಐ ಅಧಿಕಾರಿ ಸೋಗಿನಲ್ಲಿ ಬೆದರಿಕೆ ಹಾಕಿ ವೃದ್ಧನಿಂದ ಲಕ್ಷಾಂತರ ರೂಪಾಯಿ ದೋಚಿದ ಸೈಬರ್ ವಂಚಕರು

     

     

    ರಾಜ್ಯದಲ್ಲಿ ಸೈಬರ್ ಅಪರಾಧ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿದ್ದು, ಡಿಜಿಟಲ್ ಅರೆಸ್ಟ್ ಎಂಬ ಹೊಸ ತಂತ್ರದ ಮೂಲಕ ಚಿಕ್ಕಮಗಳೂರಿನ ಕಡೂರು ತಾಲೂಕಿನ ಆಸಂದಿ ಗ್ರಾಮದ ವೃದ್ಧರೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದೆ. 71 ವರ್ಷದ ಎ.ಆರ್. ಲೋಕೇಶಪ್ಪ ಅವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ, ತಾನು ಸಿಬಿಐ ಅಧಿಕಾರಿಯೆಂದು ಪರಿಚಯಿಸಿಕೊಂಡು ನರೇಶ್ ಗೋಯೆಲ್ ಪ್ರಕರಣದಲ್ಲಿ ನೀವು ಭಾಗಿಯಾಗಿದ್ದೀರಿ ಎಂದು ಭಯ ಹುಟ್ಟಿಸಿದ್ದಾನೆ. ನಂತರ ವಂಚಕರು ಅವರನ್ನು ಒಂದು ಕೊಠಡಿಯಿಂದ ಹೊರಬಾರದಂತೆ ಹಾಗೂ ಯಾರೊಂದಿಗೂ ಮಾತನಾಡದಂತೆ ಬೆದರಿಸಿ ಮಾನಸಿಕವಾಗಿ ಕುಗ್ಗಿಸಿದ್ದಾರೆ. ಪ್ರಕರಣದ ತನಿಖೆ ಮುಗಿಯುವವರೆಗೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಬೇಕೆಂದು ನಂಬಿಸಿ, ಲೋಕೇಶಪ್ಪ ಅವರಿಂದ ಹಂತ ಹಂತವಾಗಿ ಒಟ್ಟು 48.50 ಲಕ್ಷ ರೂಪಾಯಿಯನ್ನು ಪಂಗನಾಮ ಹಾಕಿದ್ದಾರೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವುದೇ ಸರ್ಕಾರಿ ಅಧಿಕಾರಿಗಳು ಫೋನ್ ಮೂಲಕ ಹಣ ವರ್ಗಾವಣೆಗೆ ಕೇಳುವುದಿಲ್ಲವಾದ್ದರಿಂದ ಸಾರ್ವಜನಿಕರು ಇಂತಹ ಬೆದರಿಕೆ ಕರೆಗಳಿಗೆ ಕಿವಿಗೊಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

  • ಆಟೋ LPG ದರ ಏಕಾಏಕಿ ಏರಿಕೆ – ಬಂಕ್ ವಿರುದ್ಧ ಚಾಲಕರ ಆಕ್ರೋಶ

    ಆಟೋ LPG ದರ ಏಕಾಏಕಿ ಏರಿಕೆ – ಬಂಕ್ ವಿರುದ್ಧ ಚಾಲಕರ ಆಕ್ರೋಶ

    ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಆಟೋ ಎಲ್‌ಪಿಜಿ ದರದಲ್ಲಿ ಏಕಾಏಕಿ ಭಾರೀ ಏರಿಕೆ ಕಂಡುಬಂದಿದ್ದು, ಆಟೋ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

    ಮಲ್ಲಂದೂರು ರಸ್ತೆಯಲ್ಲಿರುವ ಗೋ ಗ್ಯಾಸ್ ಆಟೋ ಎಲ್‌ಪಿಜಿ ಬಂಕ್‌ನಲ್ಲಿ ಮಧ್ಯಾಹ್ನ 12 ಗಂಟೆಯವರೆಗೆ ₹85 ಇದ್ದ ದರ, ಕೇವಲ ಕೆಲವು ಗಂಟೆಗಳಲ್ಲೇ ಮಧ್ಯಾಹ್ನ 3 ಗಂಟೆಗೆ ₹99.5ಕ್ಕೆ ಏರಿಕೆಯಾಗಿದೆ. ಈ ದಿಢೀರ್ ದರ ಏರಿಕೆ ಚಾಲಕರಿಗೆ ಆಘಾತ ಉಂಟುಮಾಡಿದೆ.

    ದರ ಏರಿಕೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಸರ್ಕಾರಿ ಆದೇಶವನ್ನು ಪ್ರದರ್ಶಿಸದಿರುವುದರಿಂದ, ಬಂಕ್ ಮಾಲೀಕರು ಕೃತಕ ಅಭಾವ ಸೃಷ್ಟಿಸಿ ದರ ಹೆಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. “ಸ್ಟಾಕ್ ಇದ್ದರೂ ದರ ಹೆಚ್ಚಿಸಲಾಗಿದೆ” ಎಂದು ಆಟೋ ಚಾಲಕರು ಆರೋಪಿಸಿದ್ದಾರೆ.

    ಆಕ್ರೋಶಗೊಂಡ ಚಾಲಕರು ಬಂಕ್‌ಗೆ ಆಗಮಿಸಿ ಮ್ಯಾನೇಜರ್‌ರನ್ನು ತರಾಟೆಗೆ ತೆಗೆದುಕೊಂಡು, ಹಳೆಯ ದರದಲ್ಲೇ ಗ್ಯಾಸ್ ನೀಡುವಂತೆ ಒತ್ತಾಯಿಸಿದರು. “ಸರ್ಕಾರದ ಆದೇಶವನ್ನು ತೋರಿಸಿ ಅಥವಾ ಹಳೆಯ ದರದಲ್ಲೇ ನೀಡಿ” ಎಂದು ಅವರು ಪಟ್ಟು ಹಿಡಿದರು.

    ಹಳೆಯ ದರಕ್ಕೆ ಗ್ಯಾಸ್ ನೀಡದಿದ್ದಲ್ಲಿ, ಜಿಲ್ಲೆಯಾದ್ಯಂತ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಆಟೋ ಚಾಲಕರು ಎಚ್ಚರಿಕೆ ನೀಡಿದ್ದಾರೆ.

  • ಚಿಕ್ಕಮಗಳೂರು: ಡೆತ್ ನೋಟ್ ಬರೆದಿಟ್ಟು ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ; 9 ಜನರ ವಿರುದ್ಧ ಎಫ್‌ಐಆರ್

    ಚಿಕ್ಕಮಗಳೂರು: ಡೆತ್ ನೋಟ್ ಬರೆದಿಟ್ಟು ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ; 9 ಜನರ ವಿರುದ್ಧ ಎಫ್‌ಐಆರ್

     

    ​ತರೀಕೆರೆ: ಕ್ಷುಲ್ಲಕ ಕಾರಣಕ್ಕೆ ಮಾನಸಿಕ ಕಿರುಕುಳ ಹಾಗೂ ಅವಮಾನಕ್ಕೊಳಗಾದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಸುದೀರ್ಘ ಡೆತ್ ನೋಟ್ ಹಾಗೂ ವಿಡಿಯೋ ರೆಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಮನಕಲಕುವ ಘಟನೆ ತರೀಕೆರೆ ತಾಲೂಕಿನ ಹೆಚ್.ಮಲ್ಲೇನಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.

    ಹೆಚ್.ಮಲ್ಲೇನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 2010 ರಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದ ಉಷಾ (45) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತರು ಆತ್ಮಹತ್ಯೆಗೂ ಮುನ್ನ 3 ಪುಟಗಳ ಸುದೀರ್ಘ ಡೆತ್ ನೋಟ್ ಹಾಗೂ ಸುಮಾರು 25 ನಿಮಿಷಗಳ ಸುದೀರ್ಘ ವಿಡಿಯೋವನ್ನು ಚಿತ್ರೀಕರಿಸಿದ್ದು, ತಮ್ಮ ಸಾವಿಗೆ ಕಾರಣವಾದ ಅಂಶಗಳನ್ನು ವಿವರಿಸಿದ್ದಾರೆ.

    ಸಂಘಕ್ಕೆ ಹೊಸ ಕಮಿಟಿ ಬಂದ ಮೇಲೆ ಹಳೆಯ ಲೆಕ್ಕಪತ್ರಗಳ ವಿಚಾರವಾಗಿ ಉಷಾ ಅವರಿಗೆ ತೀವ್ರ ಕಿರುಕುಳ ನೀಡಲಾಗುತ್ತಿತ್ತು ಎನ್ನಲಾಗಿದೆ. “2020ರ ಕೆಲಸಕ್ಕೆ ಈಗ ಬಿಲ್ ಕೇಳುತ್ತಿದ್ದಾರೆ, ಅದನ್ನು ಎಲ್ಲಿಂದ ತರಲಿ? ಹಣ ದುರುಪಯೋಗವಾಗಿದೆ ಎಂದು ಸುಳ್ಳು ಆರೋಪ ಮಾಡಿ ಕೋರ್ಟ್, ಪೊಲೀಸ್ ಎಂದು ಹೆದರಿಸಲಾಗುತ್ತಿದೆ” ಎಂದು ಅವರು ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.

  • ಚಿಕ್ಕಮಗಳೂರು ಎಸ್ಪಿ  ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ

    ಚಿಕ್ಕಮಗಳೂರು ಎಸ್ಪಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ

    ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ಕುಮಾರ್ ದಯ್ಮಾ ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.
    ಕಿಡಿಗೇಡಿಗಳು ಜಿತೇಂದ್ರ ಕುಮಾರ್ ದಯ್ಮಾ ಅವರ ಹೆಸರನ್ನೇ ಬಳಸಿಕೊಂಡು ಫೇಸ್ಬುಕ್ ಖಾತೆಯನ್ನು ತೆರೆಯಲಾಗಿದ್ದು, ಚಿಕ್ಕಮಗಳೂರು ಪೊಲೀಸ್ ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಖಾತೆ ಜಿತೇಂದ್ರ ಕುಮಾರ್ ದಯ್ಮಾ ಅವರು ಚಿಕ್ಕಮಗಳೂರು ಜಿಲ್ಲೆಯ ಎಸ್ಪಿಯಾಗಿ ವರ್ಗಾವಣೆಯಾದ ಬಳಿಕವೇ ಕ್ರಿಯೇಟ್ ಆಗಿರುವುದು ಶಂಕೆಗೆ ಕಾರಣವಾಗಿದೆ.
    ಈ ನಕಲಿ ಖಾತೆಯ ಮೂಲಕ ಸಾರ್ವಜನಿಕರನ್ನು ತಪ್ಪುದಾರಿಗೆಳೆಯುವ ಸಾಧ್ಯತೆ ಇರುವುದರಿಂದ, ಪೊಲೀಸರು ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದಾರೆ. ಅಲ್ಲದೆ, ಈ ಕುರಿತು ಮಾಹಿತಿ ತಿಳಿದ ಕೂಡಲೇ ಎಸ್ಪಿ ಜಿತೇಂದ್ರ ಕುಮಾರ್ ದಯ್ಮಾ ಅವರು ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
    ಪೊಲೀಸ್ ಇಲಾಖೆ ಈಗಾಗಲೇ ಈ ನಕಲಿ ಫೇಸ್ಬುಕ್ ಖಾತೆಯ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದು, ಸಂಬಂಧಪಟ್ಟ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.

  • ಚಾಲಕನ ಅಜಾಗರೂಕತೆಗೆ ಪಲ್ಟಿಯಾದ ಪಿಕಪ್; ಸಾವಿನ ದವಡೆಯಿಂದ ಇಬ್ಬರು ಪಾರು 

    ಚಾಲಕನ ಅಜಾಗರೂಕತೆಗೆ ಪಲ್ಟಿಯಾದ ಪಿಕಪ್; ಸಾವಿನ ದವಡೆಯಿಂದ ಇಬ್ಬರು ಪಾರು 

     

     

     

    ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಗ್ರಾಮದ ಬಳಿ ಅಪಘಾತವೊಂದು ಸಂಭವಿಸಿದ್ದು, ಅತಿ ವೇಗವಾಗಿ ಬಂದ ಪಿಕಪ್ ವಾಹನವೊಂದು ರಸ್ತೆಯ ಪಕ್ಕದ ಮನೆಯ ಕಾಂಪೌಂಡ್‌ಗೆ ಗುದ್ದಿ ಪಲ್ಟಿಯಾಗಿದೆ. ಎನ್.ಆರ್.ಪುರ ಕಡೆಯಿಂದ ಬಂದ ಈ ವಾಹನದ ಚಾಲಕನಿಗೆ ವೇಗದ ಮೇಲೆ ನಿಯಂತ್ರಣ ತಪ್ಪಿದ್ದೇ ಈ ಘಟನೆಗೆ ಪ್ರಮುಖ ಕಾರಣವಾಗಿದ್ದು, ಡಿಕ್ಕಿಯ ರಭಸಕ್ಕೆ ಮನೆಯ ಮುಂಭಾಗದ ಗೇಟ್ ಹಾಗೂ ಕಾಂಪೌಂಡ್ ಸಂಪೂರ್ಣವಾಗಿ ಜಖಂಗೊಂಡಿದೆ. ಅದೃಷ್ಟವಶಾತ್ ವಾಹನದಲ್ಲಿದ್ದ ಇಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದ ಸಮಯದಲ್ಲಿ ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಭೀಕರ ದುರಂತವೊಂದು ತಪ್ಪಿದಂತಾಗಿದೆ. ಪಿಕಪ್ ವಾಹನವು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಸ್ಥಳೀಯರು ಅಪಘಾತದ ತೀವ್ರತೆಯನ್ನು ಕಂಡು ದಂಗಾಗಿದ್ದಾರೆ.

  • ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿದ ಚುರ್ಚೆಗುಡ್ಡ ಮೀಸಲು ಅರಣ್ಯ; 15 ಎಕರೆ ಅರಣ್ಯ ಭಸ್ಮ

    ಚಿಕ್ಕಮಗಳೂರು: ಬಿಸಿಲ ಧಗೆಗೆ ಹೊತ್ತಿ ಉರಿದ ಚುರ್ಚೆಗುಡ್ಡ ಮೀಸಲು ಅರಣ್ಯ; 15 ಎಕರೆ ಅರಣ್ಯ ಭಸ್ಮ

     

    ​ಚಿಕ್ಕಮಗಳೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬಿಸಿಲ ತಾಪಕ್ಕೆ ಇದೀಗ ಕಾಡ್ಗಿಚ್ಚಿನ ಆತಂಕ ಎದುರಾಗಿದೆ. ನಗರದ ಹೊರವಲಯದ ಮೀಸಲು ಅರಣ್ಯ ಪ್ರದೇಶದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದಾಗಿ ಸುಮಾರು 15 ಎಕರೆಗೂ ಅಧಿಕ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.

    ​ಚಿಕ್ಕಮಗಳೂರು ತಾಲೂಕಿನ ಚುರ್ಚೆಗುಡ್ಡ ಮೀಸಲು ಅರಣ್ಯ ಹಾಗೂ ಹೊಸ ಕೋರ್ಟ್ ಹಿಂಭಾಗದಲ್ಲಿರುವ ನ್ಯಾಯಗಿರಿ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಬೇಸಿಗೆಯ ಬಿರು ಬಿಸಿಲಿನಿಂದಾಗಿ ಒಣಗಿದ್ದ ಗಿಡಗಂಟೆಗಳಿಗೆ ಬೆಂಕಿ ತಗುಲಿದ ಪರಿಣಾಮ, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಗುಡ್ಡಕ್ಕೆ ವ್ಯಾಪಿಸಿದೆ.

    ​ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅರಣ್ಯ ಪ್ರದೇಶದ ಎತ್ತರದ ಭಾಗಗಳಿಗೆ ವಾಹನಗಳು ಹೋಗಲು ಸಾಧ್ಯವಾಗದ ಕಾರಣ, ಸಿಬ್ಬಂದಿಗಳು ಮರದ ಹಸಿ ಟೊಂಗೆಗಳನ್ನು ಬಳಸಿಯೇ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ  .

    ​”ಬಿಸಿಲ ತೀವ್ರತೆ ಹೆಚ್ಚಿರುವುದರಿಂದ ಬೆಂಕಿ ವೇಗವಾಗಿ ಹರಡುತ್ತಿದೆ. ಗಾಳಿಯ ವೇಗವೂ ಹೆಚ್ಚಿರುವುದು ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ. ಆದರೂ ಬೆಂಕಿ ನಿಯಂತ್ರಿಸಲು  ಪ್ರಯತ್ನ ಮಾಡಲಾಗುತ್ತಿದೆ,”

    ​ಈ ಘಟನೆಯಿಂದಾಗಿ ಅರಣ್ಯದಲ್ಲಿದ್ದ ಅಮೂಲ್ಯ ಗಿಡಮರಗಳು ಹಾಗೂ ಸಣ್ಣಪುಟ್ಟ ವನ್ಯಜೀವಿಗಳಿಗೆ ಹಾನಿಯಾಗಿರುವ ಆತಂಕ ಎದುರಾಗಿದೆ. ಬೆಂಕಿ ಹರಡದಂತೆ ತಡೆಯಲು ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿವೆ.

  • ಚಿಕ್ಕಮಗಳೂರು: ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಗುಣಗಾನ; ತಮಿಳುನಾಡು ಮೂಲದ ಬಸ್ ತಡೆದ ಹಿಂದೂ ಸಂಘಟನೆ

    ಚಿಕ್ಕಮಗಳೂರು: ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಗುಣಗಾನ; ತಮಿಳುನಾಡು ಮೂಲದ ಬಸ್ ತಡೆದ ಹಿಂದೂ ಸಂಘಟನೆ

     

    ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನನ್ನ ಹೀರೋ ರೀತಿ ಬಿಂಬಿಸಿದ್ದ ತಮಿಳುನಾಡು ಮೂಲದ ಖಾಸಗಿ ಬಸ್ಸೊಂದನ್ನು ಹಿಂದೂ ಸಂಘಟನೆಗಳ ಕಾರ್ಯಕರ್ತರು ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.

    ​ತಮಿಳುನಾಡು ನೋಂದಣಿ ಹೊಂದಿರುವ ಖಾಸಗಿ ಬಸ್ಸೊಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿತ್ತು. ಈ ಬಸ್ಸಿನ ಮೇಲೆ ಮುಂಬೈ ಸರಣಿ ಸ್ಫೋಟದ ಸಂಚುಕೋರ, ಭೂಗತ ಲೋಕದ ಕುಖ್ಯಾತ ಅಪರಾಧಿ ದಾವೂದ್ ಇಬ್ರಾಹಿಂನ ಫೋಟೋ ಹಾಗೂ ಆತನನ್ನು ಹೊಗಳುವಂತಹ ಬರಹಗಳನ್ನು ಹಾಕಲಾಗಿತ್ತು. ಇದನ್ನು ಗಮನಿಸಿದ ಸ್ಥಳೀಯ ಹಿಂದೂ ಸಂಘಟನೆಯ ಕಾರ್ಯಕರ್ತರು ನಗರದ ಎನ್.ಎಂ.ಸಿ. (NMC) ಸರ್ಕಲ್ ಬಳಿ ಬಸ್ಸನ್ನು ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

    ​ಬಸ್ಸಿನ ಸುತ್ತಲೂ ಕಾನೂನು ಬಾಹಿರ ಚಟುವಟಿಕೆಗಳನ್ನು ಪ್ರೇರೇಪಿಸುವಂತಹ ಮತ್ತು ಅಪರಾಧ ಲೋಕವನ್ನು ವೈಭವೀಕರಿಸುವಂತಹ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿತ್ತು:

    ​”ಲೈವ್ ಬೈ ಎ ಗನ್, ಡೈ ಬೈ ಎ ಗನ್” (Live by a gun, Die by a gun) ಎಂಬ ಪ್ರಚೋದನಾಕಾರಿ ಬರಹ.

    ​ಬಸ್ಸಿನ ಮೇಲೆ “ಕ್ರೈಮ್ ಲಾರ್ಡ್ ಕ್ರಾನಿಕಲ್ಸ್” ಮತ್ತು “ದಾವೂದ್ ದಿ ರಿಯಲ್ ಡಾನ್” ಎಂಬ ಸ್ಟಿಕ್ಕರ್‌ಗಳು.

    ​ಬಸ್ಸಿನ ಹಿಂಭಾಗದಲ್ಲಿ “ಡಿ ಗ್ಯಾಂಗ್ ಆಫ್ ಮುಂಬೈ” ಎಂದು ಬರೆಸಲಾಗಿತ್ತು.

    ​ಅಲ್ಲದೆ, ದಾವೂದ್ ಇಬ್ರಾಹಿಂನ ಫೋಟೋಗಳನ್ನು ಹಾಕಿ ಆತನನ್ನು ಒಬ್ಬ ಹೀರೋನಂತೆ ಬರೆಯಲಾಗಿತ್ತು .

    ​ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ವಿವಾದಾತ್ಮಕ ಬಸ್ಸನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಬಸ್ಸನ್ನು ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಆವರಣಕ್ಕೆ ಕೊಂಡೊಯ್ಯಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾದ ವ್ಯಕ್ತಿಯನ್ನು ವೈಭವೀಕರಿಸುವುದರ ಹಿಂದೆ ಇರುವ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಚಾಲಕ ಮತ್ತು ಮಾಲೀಕರಿಂದ ಮಾಹಿತಿ ಪಡೆಯುತ್ತಿದ್ದಾರೆ.

  • ಬಾಳೆಹೊನ್ನೂರು: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಕ್ರ ಕಳಚಿದ ಘಟನೆ – ತಪ್ಪಿದ ಭಾರಿ ಅನಾಹುತ!

    ಬಾಳೆಹೊನ್ನೂರು: ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಚಕ್ರ ಕಳಚಿದ ಘಟನೆ – ತಪ್ಪಿದ ಭಾರಿ ಅನಾಹುತ!

     

    ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಸರ್ಕಾರಿ ಬಸ್ಸೊಂದು ಚಲಿಸುತ್ತಿದ್ದ ವೇಳೆ ಚಕ್ರ ಕಳಚಿ ಬಿದ್ದ ಘಟನೆ ನಡೆದಿದೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ​ಬಾಳೆಹೊನ್ನೂರಿನ ಕಾಲಭೈರವೇಶ್ವರ ದೇಗುಲದ ಸಮೀಪ ಬಸ್ ಚಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಚಕ್ರವೊಂದು ಕಳಚಿ ರಸ್ತೆಗೆ ಬಿದ್ದಿದೆ. ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಕರು ತುಂಬಿದ್ದರು. ಬಸ್ ನಿಯಂತ್ರಣ ಕಳೆದುಕೊಂಡು ಉರುಳುವ ಭೀತಿ ಎದುರಾಗಿತ್ತಾದರೂ, ಚಾಲಕ ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ​ರಸ್ತೆ ಮಧ್ಯೆಯೇ ಬಸ್ಸಿನ ಚಕ್ರ ಕಳಚಿ ಬಿದ್ದಿರುವುದನ್ನು ಕಂಡು ಪ್ರಯಾಣಿಕರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಸರ್ಕಾರಿ ಬಸ್ಸುಗಳ ಸ್ಥಿತಿ ಇಷ್ಟು ಹದಗೆಟ್ಟಿದೆಯೇ? ನಮ್ಮ ಪ್ರಾಣದ ಜೊತೆ ಸರ್ಕಾರ ಆಟವಾಡುತ್ತಿದೆ” ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.