मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य

ಜೋಕಾಲಿ ಆಟವಾಡುತ್ತಿದ್ದಾಗ : ಸೀರೆ ಕೊರಳಿಗೆ ಬಿಗಿದು 10 ವರ್ಷದ ಬಾಲಕಿ ಸಾವು

 

 

ಚಿಕ್ಕಮಗಳೂರು: ಮನೆಯಲ್ಲಿ ಜೋಕಾಲಿ ಆಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಸೀರೆ ಕೊರಳಿಗೆ ಬಿಗಿದು ಮೃತಪಟ್ಟಿರುವ ಅತ್ಯಂತ ವಿಷಾದನೀಯ ಘಟನೆ ಜಿಲ್ಲೆಯ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ತು ವರ್ಷದ ಲೇಖನಾ ಮೃತಪಟ್ಟ ದುರ್ದೈವಿ ಬಾಲಕಿಯಾಗಿದ್ದಾಳೆ.

​ಮನೆಯಲ್ಲಿ ಪೋಷಕರು ಇಲ್ಲದ ಸಮಯದಲ್ಲಿ ಲೇಖನಾ ಸೀರೆಯಿಂದ ಮಾಡಿದ ಜೋಕಾಲಿಯಲ್ಲಿ ಆಟವಾಡುತ್ತಿದ್ದಳು ಎನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ಸೀರೆಯು ಉರುಳಾಗಿ ಕತ್ತಿಗೆ ಬಿಗಿದಿದ್ದರಿಂದ ಉಸಿರುಗಟ್ಟಿ ಬಾಲಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಸಚಿವ ಸ್ಥಾನಕ್ಕಾಗಿ ದೆಹಲಿ ಯಾತ್ರೆ: ತಪ್ಪೇನಿಲ್ಲ ಸಿಎಂ ಸಿದ್ದರಾಮಯ್ಯ

ಎನ್.ಆರ್. ಪುರ: ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಸಚಿವ ಸಂಪುಟ ಪುನಾರಚನೆ ಹಾಗೂ ಶಾಸಕರ ದೆಹಲಿ ಭೇಟಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದಲ್ಲಿ  ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವ ಸ್ಥಾನಕ್ಕಾಗಿ ಶಾಸಕರು ದೆಹಲಿ ಪ್ರವಾಸ ಕೈಗೊಂಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ದೆಹಲಿಗೆ ಹೋದರೆ ತಪ್ಪೇನು? ಹೋಗಬಾರದೆಂದು ಹೇಳಿದವರು ಯಾರು? ಇದರಲ್ಲಿ ಯಾವುದೇ ತಂಟೆ-ತಕರಾರು ಇಲ್ಲ” ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ಪುನಾರಚನೆ ಕುರಿತಂತೆ ಮಾತನಾಡಿದ ಸಿಎಂ, “ಪುನಾರಚನೆ ಬಗ್ಗೆ ನಾವು ಚರ್ಚೆ ಮಾಡಿದ್ದೇವೆ. ಸಾಮಾನ್ಯವಾಗಿ ಎರಡೂವರೆ ವರ್ಷಗಳ ಬಳಿಕ ಮಾಡಬೇಕಾಗುತ್ತದೆ. ಐದು ರಾಜ್ಯಗಳ ಚುನಾವಣೆ ಹಾಗೂ ಉಪಚುನಾವಣೆಗಳ ಹಿನ್ನೆಲೆಯಲ್ಲಿ ಇದು ವಿಳಂಬವಾಗಿದೆ” ಎಂದು ಹೇಳಿದರು.
ರಾಜಕೀಯ ಕಾರ್ಯದರ್ಶಿಯ ರಾಜೀನಾಮೆ ಕುರಿತು ಪ್ರಶ್ನಿಸಿದಾಗ, “ಇನ್ನೂ ರಾಜೀನಾಮೆ ಕೊಟ್ಟಿಲ್ಲ, ಕೊಡಬಹುದು ಎಂದು ನಾನು ಅಂದುಕೊಂಡಿದ್ದೇನೆ” ಎಂದು ಹೇಳಿದರು. ಜೊತೆಗೆ ಹೈಕಮಾಂಡ್‌ನಿಂದ ಬಂದ  ಇಂಚಾರ್ಜ್ ದಾವಣಗೆರೆ ಉಪಚುನಾವಣೆಯಲ್ಲಿ ಭಾಗವಹಿಸಿದ್ದರು, ಅವರ ವರದಿ ಆಧಾರವಾಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಪಕ್ಷ ಸೋಲಿನ ಕುರಿತು ಕೇಳಿದಾಗ, ಸಿಎಂ ಪ್ರತಿಕ್ರಿಯಿಸಿ, “ತಲೆದಂಡ ಆದ್ರೆ ಸೋಲ್ತೀವಿ ಅಂತಾನೇ? ನಾವು ಸೋಲನ್ನು ಒಪ್ಪಿಕೊಂಡಿಲ್ಲ. ಗೆಲ್ಲೋದು ನಾವೇ. ನಮ್ಮವರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಹೇಳಿದ್ದೇನೆ ಹೊರತು ನಾವು ಸೋಲುತ್ತೇವೆ ಎಂದಿಲ್ಲ” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಚಿಕ್ಕಮಗಳೂರು: ನಡುರಸ್ತೆಯಲ್ಲಿ ಬಡಿಗೆ ಹಿಡಿದು ಪತಿಗೆ ಧರ್ಮದೇಟು ನೀಡಿದ ಪತ್ನಿ; ಸಾಥ್ ನೀಡಿದ ಕೌನ್ಸಿಲರ್!

 

​ಚಿಕ್ಕಮಗಳೂರು: ಕಾಫಿನಾಡಿನ ನಡುರಸ್ತೆಯಲ್ಲಿ ಕೌನ್ಸಿಲರ್ ಒಬ್ಬರು ಸಾರ್ವಜನಿಕವಾಗಿ ಬಡಿಗೆ ಹಿಡಿದು ದರ್ಪ ತೋರಿರುವ ಘಟನೆ ನಡೆದಿದೆ. ವಿಶೇಷವೆಂದರೆ, ಪೆಟ್ಟು ತಿಂದ ವ್ಯಕ್ತಿಯ ಸ್ವಂತ ಪತ್ನಿಯೇ ಕೌನ್ಸಿಲರ್ ಜೊತೆ ಸೇರಿ ಪತಿಗೆ ರೌಡಿಗಳಂತೆ ಥಳಿಸಿರುವುದು ಈಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

​ನಗರದ 34ನೇ ವಾರ್ಡ್‌ನ ಕೌನ್ಸಿಲರ್ ಲಕ್ಷಣ್ ಹಾಗೂ ಪೆಟ್ಟು ತಿಂದ ಚಂದ್ರಶೇಖರ್ ಅವರ ಪತ್ನಿ  ಸೇರಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಸೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಉಂಟಾಗಿದ್ದು, ಈ ವಿಚಾರವಾಗಿ ಚಂದ್ರಶೇಖರ್ ಮೇಲೆ ಲಕ್ಷಣ್ ಹಾಗೂ ಪತ್ನಿ  ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

​ಸಾಮಾನ್ಯವಾಗಿ ಅನ್ಯಾಯವಾದಾಗ ಕಾನೂನಿನ ಮೊರೆ ಹೋಗಬೇಕಾದವರು, ಇಲ್ಲಿ ತಾವೇ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಪತ್ನಿ  ಅವರು ಕೌನ್ಸಿಲರ್ ಲಕ್ಷಣ್ ಜೊತೆ ಸೇರಿ ರೌಡಿಗಳಂತೆ ಬಡಿಗೆ ಹಿಡಿದು ಪತಿ ಚಂದ್ರಶೇಖರ್ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಹಲ್ಲೆ ನಡೆಸಿದ್ದಲ್ಲದೆ, ಚಂದ್ರಶೇಖರ್ ಅವರ ಮೇಲೆ ಕಾರು ಹತ್ತಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಗಂಭೀರ ಆರೋಪವೂ ಕೇಳಿಬಂದಿದೆ.

 

 

​ಇಬ್ಬರ ದರ್ಪಕ್ಕೆ ಒಳಗಾಗಿ ತೀವ್ರವಾಗಿ ಗಾಯಗೊಂಡಿರುವ ಚಂದ್ರಶೇಖರ್ ಸದ್ಯ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. “ನಮಗೆ ಮತ ನೀಡಿದ್ದು ಸಿಕ್ಕ ಸಿಕ್ಕವರನ್ನು ಬಡಿಯೋದಕ್ಕಾ?” ಎಂದು ಸಾರ್ವಜನಿಕರು ಕೌನ್ಸಿಲರ್ ನಡೆಗೆ ಕಿಡಿಕಾರುತ್ತಿದ್ದಾರೆ.

​ಈ ಸಂಬಂಧ ಚಿಕ್ಕಮಗಳೂರಿನ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಕೌನ್ಸಿಲರ್ ಲಕ್ಷಣ್ ಹಾಗೂ ಪತ್ನಿ  ವಿರುದ್ಧ ಬಿ.ಎನ್.ಎಸ್ (BNS) ಕಾಯ್ದೆಯ ಸೆಕ್ಷನ್ 118(1), 352, 351(2) ಸೇರಿದಂತೆ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ

ಚಿಕ್ಕಮಗಳೂರು: ಹುಟ್ಟೂರು ತಲುಪಿದ ಶ್ರೀನಂದಾ ಮೃತದೇಹ – ಕಣ್ಣೀರಿನ ವಿದಾಯ*

 

ಚಿಕ್ಕಮಗಳೂರು: ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿದ್ದ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕದಂಪಿಹಿಪ್ಪುರಮ್ ಗ್ರಾಮದ 14 ವರ್ಷದ ಬಾಲಕಿ ಶ್ರೀನಂದಾ ದುರಂತ ಅಂತ್ಯ ಇಡೀ ಪ್ರವಾಸಕ್ಕೆಂದು ಕುಟುಂಬದವರೊಂದಿಗೆ ಬಂದಿದ್ದ ಬಾಲಕಿ ಆಕಸ್ಮಿಕವಾಗಿ ನಾಪತ್ತೆಯಾದಾಗ ಆರಂಭವಾದ ಆತಂಕವು, ಸುಮಾರು ಎರಡು ಸಾವಿರ ಅಡಿ ಆಳದ ಪ್ರಪಾತದಲ್ಲಿ ಆಕೆಯ ಮೃತದೇಹ ಪತ್ತೆಯಾದಾಗ ಕುಟುಂಬಸ್ಥರ ದುಃಖದ ಕಟ್ಟೆ ಒಡೆಯಿತು . ಅತ್ಯಂತ ಕಡಿದಾದ ಮತ್ತು ದುರ್ಗಮವಾಗಿದ್ದ ಈ ಕಣಿವೆಯಿಂದ ಮೃತದೇಹವನ್ನು ಹೊರತೆಗೆಯುವುದು ರಕ್ಷಣಾ ತಂಡಕ್ಕೆ ದೊಡ್ಡ ಸವಾಲಾಗಿತ್ತು, ಆದರೂ ಸತತ ಪರಿಶ್ರಮದ ನಂತರ ಬಾಲಕಿಯ ದೇಹವನ್ನು ಮೇಲಕ್ಕೆತ್ತಲಾಯಿತು.
ನಂತರ ಮೃತದೇಹವನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಚಿಕ್ಕಮಗಳೂರು ಜಿಲ್ಲಾ ಪೊಲೀಸರ ವಿಶೇಷ ಎಸ್ಕಾರ್ಟ್ ವಾಹನದ ಭದ್ರತೆಯೊಂದಿಗೆ ಬಾಲಕಿಯ ಶರೀರವನ್ನು ಆಕೆಯ ತವರಿಗೆ ಕಳುಹಿಸಿಕೊಡಲಾಯಿತು. ಅಂಬುಲೆನ್ಸ್ ಬಾಲಕಿಯ ಮನೆಗೆ ತಲುಪುತ್ತಿದ್ದಂತೆ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚುರುಕಾಗಿದ್ದ ಮಗು ಹೀಗೆ ಶವವಾಗಿ ಬಂದಿದ್ದನ್ನು ಕಂಡು ಗ್ರಾಮಸ್ಥರು ಮರುಗಿದರು. ನೂರಾರು ಜನರು ಅಂತಿಮ ದರ್ಶನ ಪಡೆದು ಕಂಬನಿ ಮಿಡಿಯುವ ಮೂಲಕ ಶ್ರೀನಂದಾಗೆ ವಿದಾಯ ಹೇಳಿದರು.

ಕಾಫಿನಾಡಿನ ಮಾಣಿಕ್ಯಾಧಾರ ಪ್ರಪಾತದಲ್ಲಿ ಕೇರಳದ ಬಾಲಕಿ ಅಂತ್ಯ: ತಂದೆಯ ಬುದ್ಧಿಮಾತು ಪ್ರಾಣಕ್ಕೆ ಮುಳುವಾಯಿತೇ?*

 

 

ಚಿಕ್ಕಮಗಳೂರಿನ ದತ್ತಪೀಠದ ಸಮೀಪವಿರುವ ಮಾಣಿಕ್ಯಾಧಾರದಲ್ಲಿ ನಡೆದ ಕೇರಳ ಮೂಲದ ಬಾಲಕಿ ಶ್ರೀನಂದಾ ಸಾವಿನ ಪ್ರಕರಣ ಈಗ ಮಹತ್ವದ ತಿರುವು ಪಡೆದುಕೊಂಡಿದೆ. ಪ್ರವಾಸದ ಸಮಯದಲ್ಲಿ ಸದಾ ಮೊಬೈಲ್ ಫೋನ್ ಬಳಸುತ್ತಿದ್ದ ಮಗಳಿಗೆ ತಂದೆ ಬುದ್ಧಿ ಹೇಳಿ ಗದರಿಸಿದ್ದೇ ಈ ಘಟನೆಗೆ ಪ್ರಚೋದನೆ ನೀಡಿರಬಹುದು ಎಂಬ ಶಂಕೆ ತನಿಖೆಯ ವೇಳೆ ವ್ಯಕ್ತವಾಗಿದೆ. ನಾಪತ್ತೆಯಾದ ನಂತರ ಸುಮಾರು ಎರಡು ಸಾವಿರ ಅಡಿ ಆಳದ ಪ್ರಪಾತದಲ್ಲಿ ಬಾಲಕಿಯ ಶವ ಪತ್ತೆಯಾಗಿದ್ದು, ಆಕೆ ಗುಡ್ಡದಿಂದ ಹಾರುವ ಕೆಲವೇ ಕ್ಷಣಗಳ ಮೊದಲು ತನ್ನ ಸ್ನೇಹಿತೆಯೊಂದಿಗೆ ಸರಿಸುಮಾರು 15 ನಿಮಿಷಗಳ ಕಾಲ ದೂರವಾಣಿಯಲ್ಲಿ ಮಾತನಾಡಿದ್ದಾಳೆ ಎಂಬ ತಾಂತ್ರಿಕ ಸಾಕ್ಷ್ಯವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರಂಭದಲ್ಲಿ ಅಪಹರಣದ ಶಂಕೆ ವ್ಯಕ್ತಪಡಿಸಿದ್ದ ಪೋಷಕರು ಮತ್ತು ಕುಟುಂಬದವರು ಈಗಲೂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸತ್ಯಾಸತ್ಯತೆಯನ್ನು ಹೊರತರಲು ಇಬ್ಬರು ತಜ್ಞ ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಂಪೂರ್ಣ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಇದು ಅಪ್ಪನ ಸಿಟ್ಟಿಗೆ ಮನನೊಂದು ಮಾಡಿಕೊಂಡ ಆತ್ಮಹತ್ಯೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಗೊಂದಲಕ್ಕೆ ವೈದ್ಯಕೀಯ ವರದಿ ಬಂದ ನಂತರವಷ್ಟೇ ಸ್ಪಷ್ಟ ಉತ್ತರ ಸಿಗಲಿದೆ. ಸದ್ಯಕ್ಕೆ ಈ ದುರಂತ ಪ್ರಕರಣ ಇಡೀ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದು, ಎಲ್ಲರ ಗಮನ ಈಗ ಮರಣೋತ್ತರ ಪರೀಕ್ಷೆಯ ವರದಿಯತ್ತ ನೆಟ್ಟಿದೆ.

ಕೊಪ್ಪ-ಹರಿಹರಪುರ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು: ಹನ್ನೊಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮತ್ತು ಹರಿಹರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸರಣಿ ಮನೆಗಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಮೂಲದ ಆರೋಪಿ ಮಹಮದ್ ಹನೀಫ್ ಎಂಬಾತನನ್ನು ಬಂಧಿಸಿರುವ ಪೊಲೀಸರು, ಆತನಿಂದ ಸುಮಾರು 11,45,000 ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 5 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು 16,45,000 ರೂಪಾಯಿ ಮೌಲ್ಯದ ಸ್ವತ್ತನ್ನು ಜಪ್ತಿ ಮಾಡಲಾಗಿದ್ದು, ಈ ಕಾರ್ಯಾಚರಣೆಯ ಮೂಲಕ ಕೊಪ್ಪ ಮತ್ತು ಹರಿಹರಪುರ ಠಾಣೆಗಳಲ್ಲಿ ದಾಖಲಾಗಿದ್ದ ನಾಲ್ಕು ಪ್ರಮುಖ ಕಳ್ಳತನ ಪ್ರಕರಣಗಳು ಪತ್ತೆಯಾದಂತಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಜಿತೇಂದ್ರ ಕುಮಾರ್ ದಾಮ್ಮಾ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಿ.ಟಿ. ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ, ಕೊಪ್ಪ ಉಪವಿಭಾಗದ ಡಿವೈಎಸ್‌ಪಿ ಬಾಲಾಜಿ ಸಿಂಗ್ ಹಾಗೂ ಸಿಪಿಐ ಅಬ್ದುಲ್ ಖಾದರ್ ನೇತೃತ್ವದ ವಿಶೇಷ ತಂಡವು ವೈಜ್ಞಾನಿಕ ತನಿಖೆಯ ಮೂಲಕ ಆರೋಪಿಯನ್ನು ಸೆರೆಹಿಡಿದಿದೆ. ಬಂಧಿತ ಆರೋಪಿಯು ಕದ್ದ ಕೆಲವು ಆಭರಣಗಳನ್ನು ಬೆಂಗಳೂರಿನ ಗೋಲ್ಡ್ ಕಂಪನಿಗಳಲ್ಲಿ ಮಾರಾಟ ಮಾಡಿರುವುದು ತಿಳಿದುಬಂದಿದ್ದು, ಅವುಗಳನ್ನು ವಶಪಡಿಸಿಕೊಳ್ಳಲು ತನಿಖೆ ಮುಂದುವರಿದಿದೆ. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿರುವ ಪೊಲೀಸ್ ಅಧೀಕ್ಷಕರು ಅವರಿಗೆ ಬಹುಮಾನ ಘೋಷಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯು ಕೆಲವು ಮುನ್ನೆಚ್ಚರಿಕೆಗಳನ್ನು ನೀಡಿದ್ದು, ಮನೆಯಲ್ಲಿ ಹೆಚ್ಚಿನ ನಗದು ಅಥವಾ ಚಿನ್ನಾಭರಣಗಳನ್ನು ಇಡದೆ ಬ್ಯಾಂಕ್ ಲಾಕರ್‌ಗಳನ್ನು ಬಳಸುವಂತೆ ಸೂಚಿಸಿದೆ. ಜನರು ಊರಿಗೆ ಅಥವಾ ಹೊರಗಡೆ ಹೋಗುವಾಗ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಹಾಗೂ ಮನೆಗಳ ಸುರಕ್ಷತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಸಂಗಮೇಶ್ವರಪೇಟೆ

 

 

 

ಸಂಗಮೇಶ್ವರಪೇಟೆ : ಸಂಗಮೇಶ್ವರಪೇಟೆಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಈ ಬಾರಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 100 ರಷ್ಟು ಪಲಿತಾಂಶ ಸಾಧಿಸಿರುವುದಲ್ಲದೆ ವಿಜ್ಞಾನ ವಿಭಾಗದಲ್ಲಿ ವಿಕಾಸ್ 593 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಪ್ರಸಕ್ತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು ಸಂಗಮೇಶ್ವರ ಪೇಟೆ ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

 ವಿಜ್ಞಾನ ವಿಭಾಗದಲ್ಲಿ ವಿಕಾಸ್ 593 ಅಂಕ ಗಳಿಸಿ ಜಿಲ್ಲೆಗೆ ದ್ವಿತೀಯ ಸ್ಥಾನ ಗಳಿಸಿದರೆ, ವಾಣಿಜ್ಯ ವಿಭಾಗದಲ್ಲಿ ವಿದ್ಯಾರ್ಥಿನಿ ಪ್ರಾರ್ಥನಾ 587 ಅಂಕವನ್ನು ತೆಗೆದು ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಹಾಗೂ ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಕುಳಿತ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಗೊಳ್ಳುವ ಮೂಲಕ ಕಾಲೇಜಿಗೆ ಶೇಕಡ 100 ಫಲಿತಾಂಶವನ್ನು ತಂದು ಜಿಲ್ಲೆಗೆ, ಸಂಸ್ಥೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.

ಕಠಿಣ ಪರಿಶ್ರಮ ಹಾಗೂ ಉತ್ತಮ ಮಾರ್ಗದರ್ಶನದಿಂದ ಪರೀಕ್ಷೆಗಳನ್ನು ಎದುರಿಸಲು ಸಾಧ್ಯ ಅಂತಹ ವಾತಾವರಣವು ಪೂರ್ಣಪ್ರಜ್ಞಾ ಪದವಿ ಪೂರ್ವ ಕಾಲೇಜಿನಲ್ಲಿ ಮಾತ್ರ ಇದ್ದು ಉಪನ್ಯಾಸಕ ವೃಂದದ ಪರಿಶ್ರಮ ವಿದ್ಯಾರ್ಥಿಗಳ ಅವಿರತಶ್ರಮ ಎರಡರಿಂದಲೂ ಉತ್ತಮ ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್ ವಿ ಮಂಜುನಾಥ್ ಅವರು ತಿಳಿಸಿದ್ದು, ವಿದ್ಯಾರ್ಥಿಗಳ ಸಾಧನೆಗೆ ಅದಮಾರು ಶ್ರೀ ಮಠದ ಪರಮಪೂಜ್ಯ ಈಶಪ್ರಿಯ ತೀರ್ಥ ಸ್ವಾಮೀಜಿಯವರು, ಪ್ರಾಚಾರ್ಯರಾದ ಎಸ್ ವಿ ಮೇರು ತುಂಗ ಸೇರಿದಂತೆ ಕಾಲೇಜಿನ ಉಪಾನ್ಯಾಸಕ ವೃಂದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿರುತ್ತಾರೆ.

ಕಡಿದಾದ ಪ್ರದೇಶದಲ್ಲಿದ್ದ ಮೃತದೇಹವನ್ನು ಪತ್ತೆ ಹಚ್ಚಲು ನೆರವಾದ ಹೈಟೆಕ್ ಡ್ರೋನ್ ಕ್ಯಾಮೆರಾ

 

ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರಾದಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರೀನಂದಾ ಪ್ರಕರಣ ದುರಂತ ಅಂತ್ಯ ಕಂಡಿದೆ. ಕಳೆದ ಮಂಗಳವಾರದಿಂದ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಇಂದು ಮಧ್ಯಾಹ್ನ ಬೆಟ್ಟದ ಕಡಿದಾದ ಪ್ರದೇಶದಲ್ಲಿ ಪತ್ತೆಯಾಗಿದೆ. ಕಳೆದ ಮೂರು ದಿನಗಳಿಂದ ಸ್ಥಳೀಯ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿ ಹಗಲಿರುಳು ಶೋಧ ನಡೆಸುತ್ತಿದ್ದರು. ಇಂದು ಕಾರ್ಯಾಚರಣೆ ವೇಳೆ ಕೊಳೆತ ವಾಸನೆ ಬರುತ್ತಿದ್ದ ದಿಕ್ಕಿನಲ್ಲಿ ಹುಡುಕಾಟ ನಡೆಸಿದಾಗ ಬಾಲಕಿಯ ಶವ ಪತ್ತೆಯಾಗಿದೆ. ಕಡಿದಾದ ಜಾಗವಾಗಿದ್ದರಿಂದ ಥರ್ಮಲ್ ಡ್ರೋನ್ ತಂತ್ರಜ್ಞಾನ ಬಳಸಿ ಮೃತದೇಹವನ್ನು ಗುರುತಿಸಲಾಗಿದ್ದು, ಕಾರ್ಯಾಚರಣೆಗೆ ಇದು ಸಹಕಾರಿಯಾಗಿದೆ. ಸದ್ಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಮುಂದುವರಿಸಿದ್ದಾರೆ

ಮೂರು ದಿನಗಳ ಬಳಿಕ ಕಂದಕದಲ್ಲಿ ಪತ್ತೆಯಾಯಿತು ಕೇರಳ ಬಾಲಕಿಯ ಮೃತದೇಹ

ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ ಅವರ ಮೃತದೇಹ ಪತ್ತೆಯಾಗುವ ಮೂಲಕ ಈ ಪ್ರಕರಣ ಅತ್ಯಂತ ದುಃಖದಾಯಕವಾಗಿ ಅಂತ್ಯಗೊಂಡಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ನಿವಾಸಿಯಾದ ಈ ಬಾಲಕಿ ಮಂಗಳವಾರ ಸಂಜೆ ಸುಮಾರು 5.30ರ ಹೊತ್ತಿಗೆ ಪ್ರವಾಸಿಗರ ಜನದಟ್ಟಣೆಯ ನಡುವೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದರು. ಮಗಳು ನಾಪತ್ತೆಯಾದ ತಕ್ಷಣವೇ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಕಳೆದ ಮೂರು ದಿನಗಳಿಂದ ದಟ್ಟವಾದ ಅರಣ್ಯ ಮತ್ತು ಕಡಿದಾದ ಬೆಟ್ಟಗುಡ್ಡಗಳಲ್ಲಿ ಬಾಲಕಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಸಲಾಗಿತ್ತು.

​ಅಗ್ನಿಶಾಮಕ ದಳ, ಪೊಲೀಸ್ ಮತ್ತು ಅರಣ್ಯ ಇಲಾಖೆಯ ತಂಡಗಳು ಜಂಟಿಯಾಗಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ ನಂತರ ಅಂತಿಮವಾಗಿ ಆಳವಾದ ಕಂದಕವೊಂದರಲ್ಲಿ ಬಾಲಕಿಯ ಶವ ಪತ್ತೆಯಾಗಿದೆ. ಪ್ರವಾಸಕ್ಕೆಂದು ಬಂದು ತಮ್ಮ ಪ್ರೀತಿಯ ಮಗಳನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲುಮುಟ್ಟಿದ್ದು, ಇಡೀ ಪ್ರವಾಸದ ಸಂಭ್ರಮ ವಿಷಾದವಾಗಿ ಮಾರ್ಪಟ್ಟಿದೆ. ಬಾಲಕಿಯ ಸಾವು ಕಂದಕಕ್ಕೆ ಆಕಸ್ಮಿಕವಾಗಿ ಬಿದ್ದು ಸಂಭವಿಸಿದೆಯೇ ಅಥವಾ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕೇರಳ ಬಾಲಕಿ ನಾಪತ್ತೆ ಪ್ರಕರಣ – ಮೂರನೇ ದಿನವೂ ಸುಳಿವು ಸಿಗದ್ದಕ್ಕೆ ಐಜಿ ಅಮಿತ್ ಸಿಂಗ್ ಗರಂ!

 

ಚಿಕ್ಕಮಗಳೂರು: ಕಾಫಿನಾಡಿನ ಮಾಣಿಕ್ಯಧಾರಾ ಬಳಿ ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಬಾಲಕಿ ನಾಪತ್ತೆಯಾಗಿ ಮೂರು ದಿನಗಳೇ ಕಳೆದಿದ್ದರೂ, ಇನ್ನು ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ವತಃ ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಪಶ್ಚಿಮ ವಲಯ ಐಜಿ ಅಮಿತ್ ಸಿಂಗ್, ಕಾರ್ಯಾಚರಣೆಯ ವಿಳಂಬಕ್ಕೆ ಅಧೀನ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

​ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಚಿಕ್ಕಮಗಳೂರಿಗೆ ಆಗಮಿಸಿರುವ ಐಜಿ ಅಮಿತ್ ಸಿಂಗ್, ಇಂದು ಮಾಣಿಕ್ಯಧಾರಾ ಅರಣ್ಯ ಪ್ರದೇಶ ಮತ್ತು ಬಾಲಕಿ ನಾಪತ್ತೆಯಾದ ಸ್ಥಳಗಳಿಗೆ ಭೇಟಿ ನೀಡಿದರು. ಕಳೆದ 72 ಗಂಟೆಗಳಿಂದ ನೂರಾರು ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದರೂ ಒಂದೇ ಒಂದು ಸಣ್ಣ ಸುಳಿವು ಕೂಡ ಸಿಗದಿರುವುದು ಅವರ ಕೆಂಗಣ್ಣಿಗೆ ಗುರಿಯಾಗಿದೆ.

​ತನಿಖೆಯ ಪ್ರಗತಿಯನ್ನು ಪರಿಶೀಲಿಸಿದ ಐಜಿ, ಸ್ಥಳದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಕೆಂಡಾಮಂಡಲರಾದರು. “ಬಾಲಕಿ ಕಣ್ಮರೆಯಾಗಿ ಮೂರು ದಿನಗಳಾದರೂ ಯಾವುದೇ ಪ್ರಗತಿ ಇಲ್ಲ ಎಂದರೆ ಏನರ್ಥ?” ಎಂದು ಪ್ರಶ್ನಿಸಿದ ಅವರು, ಕರ್ತವ್ಯ ಲೋಪದ ಬಗ್ಗೆ ಅಸಮಾಧಾನ ಹೊರಹಾಕಿದರು ಎನ್ನಲಾಗಿದೆ.

​”ಇಷ್ಟು ದೊಡ್ಡ ಪಡೆ ಇದ್ದೂ ಒಂದು ಮಗುವಿನ ಸುಳಿವು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲವೆಂದರೆ ನಿಮ್ಮ ತನಿಖಾ ವೈಖರಿ ಎತ್ತ ಸಾಗುತ್ತಿದೆ?” ಎಂದು ಐಜಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

​ ಸ್ಥಳದಲ್ಲಿ ಡ್ರೋನ್ ಕ್ಯಾಮೆರಾಗಳು, ಶ್ವಾನದಳ ಹಾಗೂ ನೂರಾರು ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಶೋಧ ಮುಂದುವರಿಸಿದ್ದಾರೆ. ಐಜಿ ಅವರ ಕಟ್ಟುನಿಟ್ಟಿನ ಸೂಚನೆಯ ನಂತರ, ತಪಾಸಣಾ ತಂಡಗಳನ್ನು ವಿಸ್ತರಿಸಲಾಗಿದ್ದು, ಅಕ್ಕಪಕ್ಕದ ಕಂದಕಗಳು ಮತ್ತು ದಟ್ಟ ಅರಣ್ಯ ಪ್ರದೇಶದಲ್ಲಿ ಹದ್ದಿನ ಕಣ್ಣಿಡಲಾಗಿದೆ.