ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರ ಪ್ರಾಣ ಮತ್ತು ಆಸ್ತಿಗೆ ತೀವ್ರ ಸಂಚಕಾರ ಎದುರಾಗಿದೆ. ಕಳೆದ ಒಂದು ವರ್ಷದಲ್ಲಿ ಒಟ್ಟು ಒಂಬತ್ತು ಜನರು ಕಾಡಾನೆ ದಾಳಿಗೆ ಬಲಿಯಾಗಿರುವುದು ಇಡೀ ಕ್ಷೇತ್ರವನ್ನು ಕಂಗಾಲಾಗಿಸಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ವಿಘ್ನನಿವಾರಕನ ಮೊರೆ ಹೋಗಿದ್ದು, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಆನೆಗಳ ದಾಳಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶವಾಗುತ್ತಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಸರ್ಕಾರದ ಮಟ್ಟದಲ್ಲಿ ಹಾವಳಿ ತಡೆಗೆ ಪ್ರಯತ್ನಗಳು ನಡೆಯುತ್ತಿದ್ದರೂ, ಪ್ರಾಣಹಾನಿ ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಸಂಕಷ್ಟದಿಂದ ಮುಕ್ತಿ ನೀಡುವಂತೆ ಶಾಸಕ ರಾಜೇಗೌಡ ಅವರು ತಮ್ಮ ಪತ್ನಿಯೊಂದಿಗೆ ದೇವಸ್ಥಾನಕ್ಕೆ ತೆರಳಿ , ಮಲೆನಾಡಿನ ಜನರ ರಕ್ಷಣೆಗಾಗಿ ಮತ್ತು ಕಾಡಾನೆಗಳ ಹಾವಳಿ ತಪ್ಪಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದು, ದೇವರಲ್ಲಿ ಹರಕೆ ಸಲ್ಲಿಸಿದರು. ಕ್ಷೇತ್ರದಲ್ಲಿ ಕಾಡುಪ್ರಾಣಿಗಳ ಹಾವಳಿ ನಿಂತು, ಜನರು ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಈ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ. ಕ್ಷೇತ್ರದ ಜನರ ಸುರಕ್ಷತೆಗಾಗಿ ಜನಪ್ರತಿನಿಧಿಗಳು ದೈವದ ಮೊರೆ ಹೋಗಿರುವುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
















Leave a Reply