ಚಿಕ್ಕಮಗಳೂರು: ಜಿಲ್ಲೆಯಲ್ಲೊಂದು ರಾಜಕೀಯ ಹಾಗೂ ವೈಯಕ್ತಿಕ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕಾಂಗ್ರೆಸ್ ಮಹಿಳಾ ನಾಯಕಿ ಚೇತನಾ ಅವರು ನ್ಯಾಯಕ್ಕಾಗಿ ಪ್ರಧಾನಿ ಕಚೇರಿಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ನಗರದ ಕಾಂಗ್ರೆಸ್ ನಾಯಕಿ ಚೇತನಾ ಅವರು ಯೂತ್ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ರಾಹಿಲ್ ಷರೀಫ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವಾಲಯ ಹಾಗೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಚೇತನಾ ಅವರ ಆರೋಪದ , ರಾಹಿಲ್ ಷರೀಫ್ ಅವರು ಚೇತನಾ ಅವರ ಮನೆ ಬಳಿ ಹೋಗಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಚೇತನಾ ಅವರ ಪತಿಯ ಕೈಗೆ ಗಾಯವಾಗಿದ್ದು, ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ರಾಹಿಲ್ ಷರೀಫ್ ಅವರು ಅಪಾರ್ಟ್ಮೆಂಟ್ನಲ್ಲಿ ಮಹಿಳೆಯೊಂದಿಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆ ಅಪಾರ್ಟ್ಮೆಂಟ್ ಚೇತನಾ ಅವರದ್ದಾಗಿದ್ದು, ಅದನ್ನು ರಾಹಿಲ್ ಷರೀಫ್ ಬಾಡಿಗೆಗೆ ಪಡೆದುಕೊಂಡು ವಾಸವಾಗಿದ್ದರು ಎಂದು ತಿಳಿದುಬಂದಿದೆ.
ಆ ಫೋಟೋಗಳನ್ನು ಚೇತನಾ ಅವರು ವೈರಲ್ ಮಾಡಿದ್ದಾರೆಯೆಂಬ ಅನುಮಾನದಿಂದ ರಾಹಿಲ್ ಷರೀಫ್ ಅವರು ಮನೆ ಬಳಿ ಬಂದು ಮಚ್ಚು ಬೀಸಿದರೆಂದು ಚೇತನಾ ಆರೋಪಿಸಿದ್ದಾರೆ.
ಇದರ ಜೊತೆಗೆ, ರಾಹಿಲ್ ಷರೀಫ್ ಅವರ ಮೊಬೈಲ್ನಲ್ಲಿ ಹಲವು ಹಿಂದೂ ಯುವತಿಯರ ಜೊತೆಗಿನ ಫೋಟೋಗಳು ಇದ್ದು, ಅವುಗಳನ್ನು ಬಳಸಿಕೊಂಡು ಬ್ಲಾಕ್ಮೇಲ್ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಚೇತನಾ ತಮ್ಮ ದೂರಿನಲ್ಲಿ ಬರೆದಿದ್ದಾರೆ .
ಈ ಪ್ರಕರಣದಲ್ಲಿ ಸ್ಥಳೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿರುವ ಚೇತನಾ, ನ್ಯಾಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಮಟ್ಟದ ಹಲವಾರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಇನ್ನೂ ಒಂದು ಪ್ರಮುಖ ಬೆಳವಣಿಗೆಯಲ್ಲಿ, ಈ ವಿವಾದದ ನಡುವೆ ಈಗಾಗಲೇ ರಾಹಿಲ್ ಷರೀಫ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಚಿಕ್ಕಮಗಳೂರು: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಕಚೇರಿಗೆ ಕಾಂಗ್ರೆಸ್ ಮಹಿಳಾ ನಾಯಕಿ ದೂರು













Leave a Reply