ಚಿಕ್ಕಮಗಳೂರು: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಾಣಿಕ್ಯ ಧಾರಾ ಫಾಲ್ಸ್ ಬಳಿ ಕೇರಳ ಮೂಲದ ಬಾಲಕಿ ನಾಪತ್ತೆಯಾದ ಪ್ರಕರಣ ಆತಂಕಕ್ಕೆ ಕಾರಣವಾಗಿದೆ.
ಈ ಪ್ರಕರಣದ ತನಿಖೆಗಾಗಿ ಕೇರಳ ರಾಜ್ಯದಿಂದ ಪೊಲೀಸರ ತಂಡ ಚಿಕ್ಕಮಗಳೂರಿಗೆ ಆಗಮಿಸಿದೆ. ಇನ್ಸ್ಪೆಕ್ಟರ್ ಉನ್ನಿ ನೇತೃತ್ವದ ಮೂವರು ಪೊಲೀಸರ ತಂಡ ಸ್ಥಳಕ್ಕೆ ಬಂದು, ಕಾಣೆಯಾದ ಬಾಲಕಿಯ ಪೋಷಕರ ಜೊತೆ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳಿ ವಿಚಾರಣೆ ನಡೆಸಿದೆ.
ಇದೀಗ ಹುಡುಕಾಟ ಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಸುತ್ತಮುತ್ತಲಿನ ಅರಣ್ಯ ಪ್ರದೇಶ ಹಾಗೂ ಜಲಪಾತದ ಸುತ್ತ ವ್ಯಾಪಕ ಶೋಧ ಕಾರ್ಯ ಕೈಗೊಂಡಿದ್ದಾರೆ.
ಈ ನಡುವೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸಹಾ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

