ಚಿಕ್ಕಮಗಳೂರು : ಟಿ. ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ಬಿಜೆಪಿ ಮುಖಂಡ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಇನ್ಸ್‌ಪೆಕ್ಟರ್ ಧನಂಜಯ್ ಅವರ ಮಾತು ಮತ್ತು ವರ್ತನೆ ಅಹಂಕಾರದಿಂದ ಕೂಡಿದೆ ಎಂದು ಆರೋಪಿಸಿರುವ ಸಿ.ಟಿ. ರವಿ, ಖಾಕಿ ತೊಟ್ಟು ಗೂಂಡಾಗಿರಿ ಮಾಡುವ ರೀತಿಯ ವರ್ತನೆ ಇದು ಎಂದು ಕಿಡಿಕಾರಿದ್ದಾರೆ.
ಈ ದೇಶದಲ್ಲಿ ಯಾವ ಬೀದಿಯೂ ನಿಷೇಧಿತ ಬೀದಿಯಲ್ಲ. ಮಸೀದಿ ಇದೆ ಎಂಬ ಕಾರಣಕ್ಕೆ ಮೆರವಣಿಗೆ ಹೋಗಬಾರದು ಎನ್ನುವುದು ಸರಿಯಲ್ಲ. ಸಾರ್ವಜನಿಕ ಸ್ಥಳದಲ್ಲಿ ಮೆರವಣಿಗೆ ನಡೆಸಬಾರದು ಎನ್ನುವುದು ಸಂವಿಧಾನ ವಿರೋಧಿ ಎಂದು ಸಿ.ಟಿ. ರವಿ ಹೇಳಿದ್ದಾರೆ.
“ದೊಡ್ಡ ದೊಡ್ಡ ಮಾತುಗಳನ್ನಾಡಿದ್ದಾರೆ, ಈ ಧಮ್ಕಿಯಲ್ಲಿ ನಡೆಯುವುದಿಲ್ಲ. ಧಮ್ಕಿ ಹಾಕುವವರನ್ನು ಹೇಗೆ ಎದುರಿಸಬೇಕು ಎಂಬುದು ನಮಗೆ ಗೊತ್ತಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ಸ್‌ಪೆಕ್ಟರ್ ಧನಂಜಯ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಸಿ.ಟಿ. ರವಿ ಆಗ್ರಹಪೂರ್ವಕ ಮನವಿ ಮಾಡಿದ್ದಾರೆ.
ಧನಂಜಯ್ ಅವರನ್ನು ಅಮಾನತು ಮಾಡದಿದ್ದರೆ ಗೃಹ ಸಚಿವರು ಪಕ್ಷಪಾತಿಗಳು ಎಂಬ ಭಾವನೆ ಜನರಲ್ಲಿ ಮೂಡುತ್ತದೆ. ಇದೇ ರೀತಿಯ ಧಮ್ಕಿಯನ್ನು ಅನ್ಯಕೋಮಿನವರಿಗೆ ಹಾಕಿದ್ದರೆ ದೊಡ್ಡ ವಿಚಾರ ಮಾಡುತ್ತಿದ್ದಿರಿ ಎಂದು ಸರ್ಕಾರದ ವಿರುದ್ಧವೂ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
“ನಿಮ್ಮ ಮೌನ ಜಾತ್ಯಾತೀತತೆಯ ವಿರುದ್ಧ ಇರುವ ಒಂದು ಅಸ್ತ್ರ. ಈ ವಿಚಾರದಲ್ಲಿ ನಿಮ್ಮ ಜಾತ್ಯಾತೀತತೆ ಸತ್ತುಹೋಗಿದೆ” ಎಂದು ಟೀಕಿಸಿದ್ದಾರೆ.
ಕಾರ್ಯಕರ್ತರು ಮತ್ತು ಜನರು ಅಪೇಕ್ಷೆ ಪಟ್ಟರೆ ನಾವೇ ಬಂದು ನಿಲ್ಲುತ್ತೇವೆ. “ಯಾರು ಏನು ಮಾಡಿಕೊಳ್ಳುತ್ತಾರೆ ನೋಡೋಣ” ಎಂದು ಸಿ.ಟಿ. ರವಿ ಸವಾಲು ಹಾಕಿದ್ದಾರೆ.









