ಮಲೆನಾಡಿನಲ್ಲಿ ಸಾಧಾರಣ ಮಳೆ: ತುಂಗಾ-ಭದ್ರಾ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆ – ಕ್ರೇನ್ ಮುಳುಗಡೆ 

Spread the love

 

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಸಾಧಾರಣ ಮಳೆಯಿಂದಾಗಿ ಜೀವನದಿಗಳಾದ ತುಂಗಾ ಮತ್ತು ಭದ್ರಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಕುದುರೆಮುಖ, ಕೆರೆಕಟ್ಟೆ ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ನಿನ್ನೆಯಿಂದ ಮಳೆ ಸುರಿಯುತ್ತಿರುವುದರಿಂದ ರಾತ್ರೋರಾತ್ರಿ ನದಿಗಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಮೂರ್ನಾಲ್ಕು ದಶಕಗಳ ಬಳಿಕ ಜೂನ್ ಅಂತ್ಯದಲ್ಲಿ ತೀವ್ರ ಬಿಸಿಲು ಕಂಡು ಒಣಗುತ್ತಿದ್ದ ನದಿಗಳ ಒಡಲು ಈಗ ಮತ್ತೆ ತುಂಬಿಕೊಳ್ಳುತ್ತಿದ್ದು, ಶೃಂಗೇರಿ ದೇಗುಲದ ಪಾರ್ಕಿಂಗ್ ಲಾಟ್ ಬಳಿ ತುಂಗಾ ನದಿಯ ನೀರಿನ ಮಟ್ಟ ಏರಿಕೆಯಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇದೇ ವೇಳೆ ಭದ್ರಾ ನದಿಯ ನೀರಿನ ಹರಿವು ಕೂಡ ಹೆಚ್ಚಾಗಿದ್ದು, ಎನ್.ಆರ್. ಪುರ ತಾಲೂಕಿನ ಭದ್ರಾ ನದಿ ದಡದಲ್ಲಿ ಸೇತುವೆ ಕಾಮಗಾರಿಗಾಗಿ ನಿಲ್ಲಿಸಲಾಗಿದ್ದ ಕ್ರೇನ್ ಒಂದು ನೀರಿನ ಅಬ್ಬರಕ್ಕೆ ಸಿಲುಕಿ ಮುಳುಗಡೆಯಾಗಿದೆ. ನದಿಯಲ್ಲಿ ನೀರು ಕಡಿಮೆ ಇದ್ದ ಕಾರಣ ಚಾಲಕ ಕ್ರೇನ್ ಅನ್ನು ಅಲ್ಲೇ ಬಿಟ್ಟು ಹೋಗಿದ್ದ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಮಳೆಗಾಗಿ ಮುಗಿಲು ನೋಡುತ್ತಿದ್ದ ಕಾಫಿನಾಡಿನ ರೈತರು ಮತ್ತು ಬೆಳೆಗಾರರಲ್ಲಿ ಈ ಮಳೆ ಹೊಸ ಭರವಸೆ ಮೂಡಿಸಿದ್ದು, ಅಂತರ್ಜಲ ವೃದ್ಧಿಗೆ ಇಂತಹ ಸಾಧಾರಣ ಮಳೆಯೇ ಸೂಕ್ತವಾಗಿರುವುದರಿಂದ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡಿದೆ.

Leave a Reply

Your email address will not be published. Required fields are marked *