ಚಿಕ್ಕಮಗಳೂರು: ವೈದ್ಯರ ಬೇಜವಾಬ್ದಾರಿತನ ಹಾಗೂ ನಿರ್ಲಕ್ಷ್ಯದ ಆರೋಪಕ್ಕೆ ಮೂರು ತಿಂಗಳ ಹಸುಗೂಸೊಂದು ಬಲಿಯಾಗಿರುವ ಘಟನೆ ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ನಡೆದಿದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡದೆ ಬೇರೆ ಆಸ್ಪತ್ರೆಗೆ ರೆಫರ್ ಮಾಡಿದ ಪರಿಣಾಮ, ಮಾರ್ಗಮಧ್ಯದಲ್ಲೇ ಮಗು ಕೊನೆಯುಸಿರೆಳೆದಿದೆ ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.
ಚಿಕ್ಕಮಗಳೂರು ನಗರದ ಅರವಿಂದ ನಗರ ನಿವಾಸಿಗಳಾದ ರವೀಶ್ ಹಾಗೂ ತೇಜಸ್ವಿನಿ ದಂಪತಿಯ 3 ತಿಂಗಳ ಮಗುವೇ ಮೃತಪಟ್ಟ ದುರ್ದೈವಿ.
ಜ್ವರ ಎಂದು ದಾಖಲಿಸಲಾಗಿದ್ದ ಮಗು:
ನಿನ್ನೆ ಮಗುವಿಗೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೋಷಕರು ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಮಗುವಿಗೆ ರಕ್ತದ ಕೊರತೆ ಇದೆ ಎಂದು ತಿಳಿಸಿದ್ದ ವೈದ್ಯರು, ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ಇಂದು ಮುಂಜಾನೆ ಮಗುವನ್ನು ಪರೀಕ್ಷಿಸಿದ್ದ ವೈದ್ಯರು, “ಮಗು ಈಗ ಚೆನ್ನಾಗಿದೆ, ಯಾವುದೇ ತೊಂದರೆ ಇಲ್ಲ” ಎಂದು ಪೋಷಕರಿಗೆ ಭರವಸೆ ನೀಡಿದ್ದರು ಎನ್ನಲಾಗಿದೆ.
ಕೊನೆ ಕ್ಷಣದಲ್ಲಿ ಕೈಚೆಲ್ಲಿದ ವೈದ್ಯರು:
ಆದರೆ, ಬೆಳಗ್ಗೆ 11 ಗಂಟೆಯ ಸುಮಾರಿಗೆ ಮಗುವಿನ ಸ್ಥಿತಿ ಹದಗೆಡುತ್ತಿದ್ದಂತೆ ದಿಢೀರ್ ಕೈಚೆಲ್ಲಿದ ವೈದ್ಯರು, ತಕ್ಷಣವೇ ಹಾಸನದ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ವೈದ್ಯರ ಮಾತನ್ನು ನಂಬಿ ಪೋಷಕರು ಮಗುವನ್ನು ಆಂಬ್ಯುಲೆನ್ಸ್ ಮೂಲಕ ಹಾಸನಕ್ಕೆ ಕರೆದೊಯ್ಯುತ್ತಿದ್ದರು. ಆದರೆ, ಮಾರ್ಗಮಧ್ಯೆ ಬೇಲೂರು ಸಮೀಪಿಸುತ್ತಿದ್ದಂತೆ ಮಗು ತೀವ್ರವಾಗಿ ಸುಸ್ತಾಗಿ ಕೊನೆಯುಸಿರೆಳೆದಿದೆ.
ಆಸ್ಪತ್ರೆ ಮುಂಭಾಗ ಕುಟುಂಬಸ್ಥರ ಆಕ್ರೋಶ:
ವೈದ್ಯರ ಹಠಾತ್ ನಿರ್ಧಾರ ಮತ್ತು ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ಮೃತ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಚಿಕ್ಕಮಗಳೂರಿನ ಸರ್ಕಾರಿ ಹೆರಿಗೆ ಆಸ್ಪತ್ರೆಯ ಮುಂಭಾಗ ಜಮಾಯಿಸಿ ಆಕ್ರೋಶ ಹೊರಹಾಕಿದ್ದಾರೆ. “ಬೆಳಗ್ಗೆ ಮಗು ಚೆನ್ನಾಗಿದೆ ಎಂದು ಹೇಳಿ, ಕೊನೆ ಕ್ಷಣದಲ್ಲಿ ಹಾಸನಕ್ಕೆ ಹೋಗಿ ಎಂದರೆ ನಾವು ಎಲ್ಲಿಗೆ ಹೋಗಬೇಕು? ಮೊದಲೇ ಪರಿಸ್ಥಿತಿ ತಿಳಿಸಿದ್ದರೆ ಬೇರೆ ಖಾಸಗಿ ಆಸ್ಪತ್ರೆಗಾದರೂ ದಾಖಲಿಸುತ್ತಿದ್ದೆವು” ಎಂದು ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರಂದನ ಮುಗಿಲು ಮುಟ್ಟಿದೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ















Leave a Reply