ಚಿಕ್ಕಮಗಳೂರಿನ ಸೌಂದರ್ಯವನ್ನು ಸವಿಯಲು ಗಿರಿ ಭಾಗಕ್ಕೆ ತೆರಳುವ ಪ್ರವಾಸಿಗರಿಗೆ ಮುಳ್ಳಯ್ಯನಗಿರಿ ಮತ್ತು ದತ್ತಪೀಠ ಮಾರ್ಗದಲ್ಲಿ ಅಪಾಯದ ಎಚ್ಚರಿಕೆ ಎದುರಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಸದ್ಯ ಮಳೆ ಕೊಂಚ ಬಿಡುವು ನೀಡಿದ್ದರೂ ಇಲ್ಲಿಯ ತನಕ ಸುರಿದ ಮಳೆಯಿಂದಾಗಿ ಸಾಲು ಸಾಲು ಅನಾಹುತಗಳು ಸಂಭವಿಸುತ್ತಲೇ ಇವೆ.
ಚಿಕ್ಕಮಗಳೂರು ತಾಲೂಕಿನ ಚನ್ನಗೋಡನಹಳ್ಳಿ ಕ್ರಾಸ್ ಬಳಿ ಭಾರಿ ಬಿರುಗಾಳಿಗೆ ಬೃಹತ್ ಮರವೊಂದು ಬುಡಸಮೇತ ರಸ್ತೆಗೆ ಉರುಳಿಬಿದ್ದಿದೆ. ಇದೇ ವೇಳೆ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಸವಾರನ ಮೇಲೆಯೇ ಮರದ ತುದಿಯ ಭಾಗ ಬಿದ್ದಿದೆ. ಅದೃಷ್ಟವಶಾತ್, ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಹಲವು ದಿನಗಳಿಂದ ಸುರಿದ ಸತತ ಮಳೆಯಿಂದಾಗಿ ಮುಳ್ಳಯ್ಯನಗಿರಿ ಮತ್ತು ದತ್ತಪೀಠ ಸುತ್ತಮುತ್ತಲಿನ ಭೂಮಿ ಸಂಪೂರ್ಣ ತೇವದಿಂದ ಕೂಡಿದ್ದು , ಅಲ್ಲಲ್ಲಿ ಭೀಕರ ಧರೆ ಕುಸಿತಗಳು ಸಂಭವಿಸುತ್ತಿವೆ. ಇದರ ಜೊತೆಗೆ ರಸ್ತೆಬದಿಯ ಸಾಲು ಸಾಲು ಬೃಹತ್ ಮರಗಳು ರಸ್ತೆಯತ್ತ ಅಪಾಯಕಾರಿಯಾಗಿ ವಾಲಿಕೊಂಡಿವೆ. ಈ ನಿಟ್ಟಿನಲ್ಲಿ ಈ ಮಾರ್ಗದಲ್ಲಿ ಪ್ರಯಾಣಿಸುವ ಪ್ರವಾಸಿಗರು ಮತ್ತು ಸ್ಥಳೀಯರು ತೀವ್ರ ಮುನ್ನೆಚ್ಚರಿಕೆಯಿಂದ ಸಂಚರಿಸಬೇಕಿದೆ.


