🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

ಗಿರಿಭಾಗದಲ್ಲಿ ಪ್ರವಾಸಿಗರ ಸಾಗರ; ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್, ಪ್ರವಾಸಿಗರು ಹೈರಾಣು!

---Advertisement---

 

​ಚಿಕ್ಕಮಗಳೂರು: ಸಾಲು-ಸಾಲು ರಜೆಗಳ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರಿನ ಪಶ್ಚಿಮ ಘಟ್ಟಗಳ ತಪ್ಪಲಿಗೆ ಪ್ರವಾಸಿಗರ ಸಾಗರವೇ ಹರಿದುಬಂದಿದೆ. ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಗಾಳಿಕೆರೆಯಂತಹ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನಜಾತ್ರೆ ಕಂಡುಬಂದಿದ್ದು, ಪ್ರಕೃತಿ ಸೌಂದರ್ಯ ಸವಿಯಲು ಬಂದ ಪ್ರವಾಸಿಗರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡುವಂತಾಗಿದೆ.

​ಗಿರಿಭಾಗದಲ್ಲಿ ಜನಜಾತ್ರೆ: ಸಿಲುಕಿದ ಸಾವಿರಕ್ಕೂ ಹೆಚ್ಚು ಕಾರುಗಳು

​ವೀಕೆಂಡ್ ಹಾಗೂ ಸರಣಿ ರಜೆಗಳ ಕಾರಣದಿಂದಾಗಿ ಗಿರಿಭಾಗಕ್ಕೆ ಏಕಾಏಕಿ ಸಾವಿರಾರು ಪ್ರವಾಸಿ ವಾಹನಗಳು ಲಗ್ಗೆ ಇಟ್ಟಿವೆ. ಮುಳ್ಳಯ್ಯನಗಿರಿಯ ಕಿರಿದಾದ ರಸ್ತೆಯಲ್ಲಿ ಒಂದೇ ಬಾರಿಗೆ ಸಾವಿರಕ್ಕೂ ಹೆಚ್ಚು ಕಾರುಗಳು ನುಗ್ಗಿದ್ದರಿಂದ ಭೀಕರ ಟ್ರಾಫಿಕ್ ಜಾಮ್ ಉಂಟಾಗಿದೆ. ಮುಖ್ಯವಾಗಿ ಪಂಡರವಳ್ಳಿ ಹಾಗೂ ಸೀತಾಳಯ್ಯನಗಿರಿ ಭಾಗದಲ್ಲಿ ವಾಹನಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿದ್ದು, ಬೆಳಗ್ಗೆಯಿಂದಲೇ ಪ್ರವಾಸಿಗರು ಟ್ರಾಫಿಕ್‌ನಿಂದ ಹೊರಬರಲಾರದೆ ಹೈರಾಣಾಗಿದ್ದಾರೆ.

​ಪ್ರವಾಸೋದ್ಯಮ ಇಲಾಖೆ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ!

​ಈ ಭಾರಿ ಅವಾಂತರಕ್ಕೆ ಪ್ರವಾಸೋದ್ಯಮ ಇಲಾಖೆಯ ಯಡವಟ್ಟೇ ಕಾರಣ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗಿರಿಭಾಗಕ್ಕೆ ವಾಹನ ದಟ್ಟಣೆ ನಿಯಂತ್ರಿಸಲು ಜಾರಿಗೆ ತರಲಾಗಿದ್ದ ಆನ್‌ಲೈನ್ ಟಿಕೆಟ್ ನಿಯಮವನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

​ಪ್ರವಾಸಿಗರ ಗಂಭೀರ ಆರೋಪ: “ಆನ್‌ಲೈನ್ ನಿಯಮಗಳನ್ನು ಬದಿಗೊತ್ತಿ, ಚೆಕ್‌ಪೋಸ್ಟ್‌ನಲ್ಲಿ ಒಂದು ಕಾರಿಗೆ ಬರೋಬ್ಬರಿ 1,000 ದಿಂದ 1,500 ರೂಪಾಯಿ ಹಣವನ್ನು ಅಕ್ರಮವಾಗಿ ಪಡೆದು ಪ್ರವಾಸಿ ವಾಹನಗಳನ್ನು ಗಿರಿಭಾಗಕ್ಕೆ ಬಿಡಲಾಗುತ್ತಿದೆ. ಇಲಾಖೆಯ ಈ ಹಣದ ಹಪಾಹಪಿತನದಿಂದಾಗಿ ಇಂದು ಸಾವಿರಾರು ಜನರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದ.”

 

​ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ

​ಕಿರಿದಾದ ರಸ್ತೆ ಹಾಗೂ ಅತಿಯಾದ ವಾಹನಗಳ ದಟ್ಟಣೆಯಿಂದಾಗಿ ಇಡೀ ಗಿರಿಪ್ರದೇಶ ಧೂಳು ಮತ್ತು ಹಾರ್ನ್‌ಗಳ ಸದ್ದಿನಿಂದ ತುಂಬಿಹೋಗಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮತ್ತು ಟ್ರಾಫಿಕ್ ಕ್ಲಿಯರ್ ಮಾಡಲು ಸ್ಥಳೀಯ ಪೊಲೀಸರು ಹಾಗೂ ಚೆಕ್‌ಪೋಸ್ಟ್ ಸಿಬ್ಬಂದಿ ತೀವ್ರ ಹರಸಾಹಸ ಪಡುತ್ತಿದ್ದಾರೆ. ಆದರೆ ವಾಹನಗಳ ಸಂಖ್ಯೆ ಮಿತಿಮೀರಿರುವುದರಿಂದ ಸಂಚಾರ ಸುಗಮಗೊಳಿಸುವುದು ಸವಾಲಾಗಿ ಪರಿಣಮಿಸಿದೆ.

​ಒಟ್ಟಿನಲ್ಲಿ, ಪ್ರಕೃತಿಯ ಮಡಿಲಲ್ಲಿ ನೆಮ್ಮದಿ ಹುಡುಕಿಕೊಂಡು ಬಂದ ಪ್ರವಾಸಿಗರು, ಪ್ರವಾಸೋದ್ಯಮ ಇಲಾಖೆಯ ಅವ್ಯವಸ್ಥೆ ಮತ್ತು ಟ್ರಾಫಿಕ್ ಜಂಜಾಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ. ಭವಿಷ್ಯದಲ್ಲಾದರೂ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ನಿರ್ವಹಣೆ ಮಾಡಲಿದೆಯೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.