ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಮಲ್ಲಂದೂರು ಸಮೀಪವಿರುವ, ರಾಜ್ಯ ಸಚಿವ ಕೆ.ಜೆ. ಜಾರ್ಜ್ ಒಡೆತನದ ಪ್ರಸಿದ್ಧ ಏಳುನೂರುಖಾನ್ ಕಾಫಿ ತೋಟಕ್ಕೆ ಮಾರಕಾಸ್ತ್ರ ಹಾಗೂ ಬಂದೂಕುಧಾರಿಗಳ ತಂಡವೊಂದು ಅಕ್ರಮವಾಗಿ ನುಸುಳಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮುತ್ತೋಡಿ ವನ್ಯಜೀವಿ ಅಭಯಾರಣ್ಯದ ತಪ್ಪಲಿಗೆ ಹೊಂದಿಕೊಂಡಂತಿರುವ ಈ ಕಾಫಿ ಎಸ್ಟೇಟ್‌ನಲ್ಲಿ ಜೂನ್ 17, 21 ಮತ್ತು 22ರ ಮಧ್ಯರಾತ್ರಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಓಡಾಡಿರುವುದು ಪತ್ತೆಯಾಗಿದೆ. ಹೆಗಲಿಗೆ ಬಂದೂಕು ಹಾಗೂ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ದೃಶ್ಯಗಳು ತೋಟದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿವೆ.
ಅಪರಿಚಿತರ ಈ ಅಕ್ರಮ ಪ್ರವೇಶ ಮತ್ತು ಚಲನವಲನಗಳು ತೋಟದ ಸಿಬ್ಬಂದಿ ಹಾಗೂ ವ್ಯವಸ್ಥಾಪಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಎಸ್ಟೇಟ್ ಮುತ್ತೋಡಿ ಅಭಯಾರಣ್ಯದ ಗಡಿಯಲ್ಲೇ ಇರುವುದರಿಂದ, ಈ ತಂಡವು ಕಾಡುಪ್ರಾಣಿಗಳನ್ನು ಅಕ್ರಮವಾಗಿ ಬೇಟೆಯಾಡಲು ಬಂದಿರಬಹುದು ಅಥವಾ ಬೇರೆನಾದರೂ ಕಾನೂನುಬಾಹಿರ ಚಟುವಟಿಕೆಗೆ ಸಂಚು ರೂಪಿಸಿರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.
”ಮಧ್ಯರಾತ್ರಿ ಶಸ್ತ್ರಸಜ್ಜಿತರಾಗಿ ಬಂದಿಳಿದ ಅಪರಿಚಿತರಿಂದ ತೋಟದ ಭದ್ರತೆ ಹಾಗೂ ಕಾರ್ಮಿಕರ ರಕ್ಷಣೆಗೆ ಆತಂಕ ಎದುರಾಗಿದೆ
ಈ ಗಂಭೀರ ಘಟನೆಗೆ ಸಂಬಂಧಿಸಿದಂತೆ ಎಸ್ಟೇಟ್‌ನ ಹಿರಿಯ ವ್ಯವಸ್ಥಾಪಕಿ ದಿವ್ಯಾ ಅವರು ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳ ಸಮೇತ ಮಲ್ಲಂದೂರು ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಲ್ಲಂದೂರು ಪೊಲೀಸರು, ಸಿಸಿಟಿವಿ ಫೂಟೇಜ್ ಆಧರಿಸಿ ಅಕ್ರಮ ನುಸುಳುಕೋರರ ಪತ್ತೆಗಾಗಿ ಜಾಲ ಬೀಸಿದ್ದು, ತನಿಖೆಯನ್ನು ಚುರುಕುಗೊಳಿಸಿದ್ದಾರೆ.
















Leave a Reply