🏠 Home ದೇಶ ಜಿಲ್ಲಾ ಸುದ್ದಿ ತಾಲ್ಲೂಕು ರಾಜ್ಯ ರಾಜಕೀಯ  ಆರೋಗ್ಯ  ಕ್ರೈಮ್  ಪ್ರವಾಸ ಶಿಕ್ಷಣ

 

Breaking News
---Advertisement---
 

25 ಮಕ್ಕಳ ಬಾಳಲ್ಲಿ ಬೆಳಕಾದ ಕನ್ನಡ ಸಾಹಿತ್ಯ ಪರಿಷತ್; ಉಚಿತ ಹೃದಯ ಶಸ್ತ್ರಚಿಕಿತ್ಸೆ!

---Advertisement---

ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಂದರೆ ಕೇವಲ ಸಾಹಿತ್ಯ, ಕವಿಗೋಷ್ಠಿ, ಪುಸ್ತಕ ಬಿಡುಗಡೆಗಷ್ಟೇ ಸೀಮಿತವಲ್ಲ ಎಂಬುದನ್ನು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಘಟಕವು ಸಾಬೀತುಪಡಿಸಿದೆ. ಅಕ್ಷರ ಸೇವೆಯ ಜೊತೆಗೆ ಅಪರೂಪದ ಜನಸೇವೆಯ ಮೂಲಕ ಬರೋಬ್ಬರಿ 25 ಕಡುಬಡ ಮಕ್ಕಳ ಬಾಳಿಗೆ ಬೆಳಕಾಗುವ ಮೂಲಕ ಕಸಾಪ ಮಹತ್ಕಾರ್ಯವೊಂದಕ್ಕೆ ಮುನ್ನುಡಿ ಬರೆದಿದೆ.

​ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 25 ಮಕ್ಕಳಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ಕೊಡಿಸುವ ಮೂಲಕ ಜಿಲ್ಲಾ ಕಸಾಪ ಘಟಕವು ಮಾನವೀಯತೆ ಮೆರೆದಿದೆ.

​ಶಿಬಿರದಲ್ಲಿ ಪತ್ತೆಯಾಗಿದ್ದ ಮಕ್ಕಳು:

​ಕಳೆದ ಮೇ 16ರಂದು ಚಿಕ್ಕಮಗಳೂರು ಜಿಲ್ಲಾ ಕಸಾಪ ಘಟಕದ ವತಿಯಿಂದ ಬೃಹತ್ ಹೃದಯ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಖ್ಯಾತ ಮಕ್ಕಳ ಹಾಗೂ ಹೃದ್ರೋಗ ತಜ್ಞರಾದ ಡಾ. ಗೋವಿಂದರಾಜ್ ನೇತೃತ್ವದ ವೈದ್ಯರ ತಂಡವು ಅಂದು ಶಿಬಿರದಲ್ಲಿ ನೂರಾರು ಮಕ್ಕಳ ತಪಾಸಣೆ ನಡೆಸಿತ್ತು. ಈ ವೇಳೆ 9 ತಿಂಗಳ ಹಸುಗೂಸಿನಿಂದ ಹಿಡಿದು 14 ವರ್ಷದೊಳಗಿನ 25 ಮಕ್ಕಳಿಗೆ ತುರ್ತು ಹೃದಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದು ಪತ್ತೆಯಾಗಿತ್ತು.

​ವೈದೇಹಿ ಆಸ್ಪತ್ರೆ ಸಹಯೋಗ – ಎಲ್ಲವೂ ಉಚಿತ!

​ಬಡ ಪೋಷಕರಿಗೆ ಲಕ್ಷಾಂತರ ರೂಪಾಯಿ ವೆಚ್ಚದ ಈ ಚಿಕಿತ್ಸೆ ಗಗನಕುಸುಮವಾಗಿತ್ತು. ಇದನ್ನು ಅರಿತ ಕಸಾಪ ಘಟಕವು ತಕ್ಷಣವೇ ಬೆಂಗಳೂರಿನ ಪ್ರಸಿದ್ಧ ವೈದೇಹಿ ಆಸ್ಪತ್ರೆಯ ಸಹಯೋಗ ಮತ್ತು ಸಹಕಾರದೊಂದಿಗೆ ಈ ಎಲ್ಲಾ 25 ಮಕ್ಕಳಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆ ಕೊಡಿಸಲು ಮುಂದಾಗಿದೆ.

​ವಿಶೇಷತೆ ಏನು?: ಕೇವಲ ಶಸ್ತ್ರಚಿಕಿತ್ಸೆ ಮಾತ್ರವಲ್ಲದೆ, ಮಕ್ಕಳ ಆಪರೇಷನ್ ವೆಚ್ಚ, ಪೋಷಕರಿಗೆ ಊಟ, ತಿಂಡಿ ಹಾಗೂ ವಸತಿ ಸೇರಿದಂತೆ ಪ್ರತಿಯೊಂದು ವ್ಯವಸ್ಥೆಯನ್ನೂ ಸಂಪೂರ್ಣ ಉಚಿತವಾಗಿ ಕಲ್ಪಿಸಲಾಗಿದೆ.

​ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಬೀಳ್ಕೊಡುಗೆ:

​ಶಸ್ತ್ರಚಿಕಿತ್ಸೆಗಾಗಿ ಆಯ್ಕೆಯಾದ 25 ಮಕ್ಕಳು ಹಾಗೂ ಅವರ ಪೋಷಕರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲು ಚಿಕ್ಕಮಗಳೂರಿನಿಂದಲೇ ಕಸಾಪ ಘಟಕವು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಜಿಲ್ಲಾ ಕಸಾಪ ಪದಾಧಿಕಾರಿಗಳು ಹಾಗೂ ಪ್ರಮುಖರು ಶಸ್ತ್ರಚಿಕಿತ್ಸೆಗೆ ತೆರಳಿದ ಮಕ್ಕಳಿಗೆ ಧೈರ್ಯ ತುಂಬಿ, ಶುಭ ಹಾರೈಸಿ ಬಸ್ ಮೂಲಕ ಬೆಂಗಳೂರಿಗೆ ಆತ್ಮೀಯವಾಗಿ ಬೀಳ್ಕೊಟ್ಟರು.

​ಸಾಹಿತ್ಯಿಕ ಚಟುವಟಿಕೆಗಳ ನಡುವೆ, ಬಡ ಕುಟುಂಬಗಳ ಕಣ್ಣೀರು ಒರೆಸಿ, ಮಕ್ಕಳ ಜೀವ ಉಳಿಸುವ ಇಂತಹ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಘಟಕದ ನಡೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.