ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಶೃಂಗೇರಿಯಲ್ಲಿ ಪ್ರವಾಸಕ್ಕೆಂದು ಬಂದಿದ್ದ ಯುವಕರ ಖುಷಿ ಕ್ಷಣಾರ್ಧದಲ್ಲೇ ದುರಂತದಲ್ಲಿ ಅಂತ್ಯವಾಗಿದೆ. ಇಲ್ಲಿನ ಗಾಂಧಿ ಮೈದಾನದ ಸಮೀಪ ಹರಿಯುವ ತುಂಗಾ ನದಿಯಲ್ಲಿ ಈಜಲು ತೆರಳಿದ್ದ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ ದರ್ಶನ್ (22) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ನೇಹಿತರೊಂದಿಗೆ ಪ್ರವಾಸದ ಸಲುವಾಗಿ ಶೃಂಗೇರಿಗೆ ಬಂದಿದ್ದ ನಾಲ್ವರು ಯುವಕರ ತಂಡ ನದಿಯಲ್ಲಿ ಸ್ನಾನ ಮಾಡಲು ನೀರಿಗೆ ಇಳಿದಿತ್ತು. ಈ ಸಂದರ್ಭದಲ್ಲಿ ನದಿಯ ಆಳ ಮತ್ತು ನೀರಿನ ರಭಸದ ಅಂದಾಜಿಲ್ಲದೆ ದರ್ಶನ್ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಜೊತೆಯಲ್ಲಿದ್ದ ಮೂವರು ಸ್ನೇಹಿತರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ದಡ ಸೇರಿದರಾದರೂ, ನೀರಿನ ಸೆಳೆತದಿಂದ ಹೊರಬರಲಾಗದ ದರ್ಶನ್ ಉಸಿರುಗಟ್ಟಿ ಜಲಸಮಾಧಿಯಾಗಿದ್ದಾನೆ.
ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಶೃಂಗೇರಿ ಠಾಣಾ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನದಿಯಲ್ಲಿ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ನೇಹಿತರೊಂದಿಗೆ ಸಂಭ್ರಮಿಸಲು ಬಂದ ಯುವಕನ ದುರಂತ ಅಂತ್ಯ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದ್ದು, ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ಕಾನೂನು ಕ್ರಮಗಳು ಜಾರಿಯಲ್ಲಿವೆ.



