ನ್ಯೂಯಾರ್ಕ್: ಅಮೆರಿಕಾದಲ್ಲಿ ಖ್ಯಾತ ನಟಿ ಕಾರುಣ್ಯ ರಾಮ್ ಅವರ ಭಾರತೀಯ ಪಾಸ್‌ಪೋರ್ಟ್ ನಾಪತ್ತೆಯಾಗಿದ್ದು, ಭಾರತೀಯ ರಾಯಭಾರಿ ಅಧಿಕಾರಿಗಳ ತುರ್ತು ಸ್ಪಂದನೆಯಿಂದ ಕೇವಲ ಒಂದು ಗಂಟೆಯಲ್ಲೇ ಹೊಸ ಪಾಸ್‌ಪೋರ್ಟ್ ವಿತರಿಸಲಾಗಿದೆ.
ಏರ್‌ಪೋರ್ಟ್‌ನಲ್ಲಿ ಇಮಿಗ್ರೇಶನ್ ತಪಾಸಣೆ ನಡೆಯುತ್ತಿದ್ದ ವೇಳೆ ತಮ್ಮ ಭಾರತೀಯ ಪಾಸ್‌ಪೋರ್ಟ್ ನಾಪತ್ತೆಯಾಗಿರುವುದು ಕಾರುಣ್ಯ ರಾಮ್ ಅವರ ಗಮನಕ್ಕೆ ಬಂದಿದೆ. ಕೂಡಲೇ ಅವರು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಕಚೇರಿಯನ್ನು ಸಂಪರ್ಕಿಸಿ, ಪಾಸ್‌ಪೋರ್ಟ್ ಕಳೆದುಹೋಗಿರುವ ಕುರಿತು ಮನವಿ ಸಲ್ಲಿಸಿದ್ದಾರೆ.
ಮನವಿಗೆ ತಕ್ಷಣ ಸ್ಪಂದಿಸಿದ ಭಾರತೀಯ ರಾಯಭಾರಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದ್ದಾರೆ. ಕೇವಲ ಒಂದು ಗಂಟೆಯ ಅವಧಿಯಲ್ಲಿ ಕಾರುಣ್ಯ ರಾಮ್ ಅವರಿಗೆ ಹೊಸ ಭಾರತೀಯ ಪಾಸ್‌ಪೋರ್ಟ್ ವಿತರಿಸಲಾಗಿದೆ.
ಭಾರತೀಯ ಅಧಿಕಾರಿಗಳ ಈ ತ್ವರಿತ ಹಾಗೂ ತುರ್ತು ಕ್ರಮಕ್ಕೆ ನಟಿ ಕಾರುಣ್ಯ ರಾಮ್ ಸಂತಸ ವ್ಯಕ್ತಪಡಿಸಿದ್ದು, ಸಂಕಷ್ಟದ ಸಂದರ್ಭದಲ್ಲಿ ತಕ್ಷಣ ಸ್ಪಂದಿಸಿದ ಭಾರತ ಸರ್ಕಾರ ಮತ್ತು ರಾಯಭಾರಿ ಅಧಿಕಾರಿಗಳಿಗೆ ಧನ್ಯವಾದ ಹಾಗೂ ಶ್ಲಾಘನೆ ಸಲ್ಲಿಸಿದ್ದಾರೆ.
ವಿದೇಶದಲ್ಲಿ ಭಾರತೀಯ ಪ್ರಜೆಗಳಿಗೆ ಅಗತ್ಯ ಸಂದರ್ಭದಲ್ಲಿ ರಾಯಭಾರಿ ಕಚೇರಿಗಳು ನೀಡುವ ತ್ವರಿತ ನೆರವಿಗೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದೆ.











