
ದಾವಣಗೆರೆ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ವಿಭಾಗ ಮಟ್ಟದ 14 ವರ್ಷದೊಳಗಿನ ಬಾಲಕರ ಕ್ರಿಕೆಟ್ ಪಂದ್ಯಾವಳಿಯಲ್ಲಿ, ದಾವಣಗೆರೆಯ ಗುರುಕುಲ ವಸತಿ ಶಾಲೆಯ ತಂಡವು ಪ್ರಥಮ ಸ್ಥಾನ ಪಡೆದು ಕರ್ನಾಟಕ ರಾಜ್ಯಮಟ್ಟದ ಪಂದ್ಯಾವಳಿಗೆ ಅಧಿಕೃತವಾಗಿ ಆಯ್ಕೆಯಾಗಿದೆ.

ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಬೆಂಗಳೂರು ಉತ್ತರ, ಚಿತ್ರದುರ್ಗ, ಕೋಲಾರ, ರಾಮನಗರ, ಮಧುಗಿರಿ, ಶಿವಮೊಗ್ಗ, ತುಮಕೂರು, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಹಾಗೂ ದಾವಣಗೆರೆ ಸೇರಿದಂತೆ ಒಟ್ಟು 11 ಜಿಲ್ಲೆಗಳ ಪ್ರಬಲ ತಂಡಗಳು ಭಾಗವಹಿಸಿದ್ದವು.
ರೋಚಕ ಗೆಲುವು ಮತ್ತು ಚಾಂಪಿಯನ್ ಪಟ್ಟ
ಅಂತಿಮ ಹಣಾಹಣಿಯಲ್ಲಿ ಆತಿಥೇಯ ಶಿವಮೊಗ್ಗ ತಂಡವನ್ನು ಎದುರಿಸಿದ ಗುರುಕುಲ ಶಾಲೆಯ ಹುಡುಗರು, ಅತ್ಯುತ್ತಮ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಪ್ರದರ್ಶಿಸಿ ರೋಚಕ ಗೆಲುವು ದಾಖಲಿಸಿದರು. ಈ ಮೂಲಕ ಸತತ ಎರಡನೇ ಬಾರಿ ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಆಟಗಾರರ ಕಠಿಣ ಪರಿಶ್ರಮ, ಶಿಸ್ತು ಮತ್ತು ಮೈದಾನದಲ್ಲಿ ತೋರಿದ ಒಗ್ಗಟ್ಟು ಈ ದೊಡ್ಡ ಗೆಲುವಿಗೆ ಪ್ರಮುಖ ಕಾರಣವಾಗಿದೆ. ತಂಡಕ್ಕೆ ಸೂಕ್ತ ಹಾಗೂ ನಿರಂತರ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರ ಶ್ರಮ ಅಭಂದನಾರ್ಹವಾಗಿದೆ.
ಗಣ್ಯರಿಂದ ಅಭಿನಂದನೆಗಳ ಮಹಾಪೂರ
ವಿದ್ಯಾರ್ಥಿಗಳ ಈ ಗಮನಾರ್ಹ ಸಾಧನೆಗೆ ಶಾಲೆಯ ಅಧ್ಯಕ್ಷರಾದ ಅಬ್ದುಲ್ ಆರ್., ಶಾಲಾ ಸಂಯೋಜಕರಾದ ಶ್ವೇತಾ ಎಂ.ಎಚ್., ಎಲ್ಲಾ ಮುಖ್ಯೋಪಾಯ್ಯಾಯರು, ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ಸಮಸ್ತ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.



