ಕೊಪ್ಪ: ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಜೆಡಿಎಸ್ ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಅವರ ನೇತೃತ್ವದಲ್ಲಿ ಕೊಪ್ಪ ತಾಲೂಕು ಕಚೇರಿಯ ಮುಂಭಾಗ ಬೃಹತ್ ಪ್ರತಿಭಟನೆ ನಡಸಿದರು. ಜೆಡಿಎಸ್ ತಾಲೂಕು ಕಚೇರಿಯಿಂದ ಮೆರವಣಿಗೆಯ ಮೂಲಕ ತಾಲೂಕು ಕಚೇರಿ ಆವರಣ ತಲುಪಿದ ನೂರಕ್ಕೂ ಹೆಚ್ಚು ಕಾರ್ಯಕರ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹಿರಿಯ ನಾಗರಿಕರ ಮಾಸಾಶನ, ಸಂಧ್ಯಾ ಸುರಕ್ಷಾ ಹಾಗೂ ವೃದ್ಧಾಪ್ಯ ವೇತನ ನೆಚ್ಚಿಕೊಂಡಿರುವ ಬಡ ಫಲಾನುಭವಿಗಳಿಗೆ ತಹಶೀಲ್ದಾರ್ ಮೂಲಕ ನೋಟಿಸ್ ಜಾರಿಗೊಳಿಸಿರುವುದನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಕೇವಲ ಈ ಪಿಂಚಣಿಯನ್ನೇ ನಂಬಿ ಜೀವನ ನಡೆಸುತ್ತಿರುವ ಅಸಹಾಯಕ ವೃದ್ಧರ ಹೊಟ್ಟೆಗೆ ಸರ್ಕಾರ ಹೊಡೆಯುತ್ತಿದ್ದು, ತಕ್ಷಣವೇ ಹಣ ಬಿಡುಗಡೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇದೇ ವೇಳೆ ಸ್ಥಳೀಯ ಶಾಸಕರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜೆಡಿಎಸ್ ಮುಖಂಡರು , ಬಡವರ ಸಮಸ್ಯೆಗೆ ಧ್ವನಿಯಾಗದ ಶಾಸಕರ ವಿರುದ್ಧ ಆಕ್ರೋಶ ಹೊರಹಾಕಿದರು. ಕ್ಷೇತ್ರದಲ್ಲಿನ ರಸ್ತೆಗಳು ಹೊಂಡ-ಗುಂಡಿಗಳಿಂದ ತುಂಬಿ ತುಳುಕುತ್ತಿದ್ದರೂ ಅವುಗಳನ್ನು ಮುಚ್ಚಲು ಶಾಸಕರಿಗೆ ಯೋಗ್ಯತೆ ಇಲ್ಲವೇ ಎಂದು ಪ್ರತಿಭಟನಾ ಸಭೆಯಲ್ಲಿ ಕಟುವಾಗಿ ಪ್ರಶ್ನಿಸಿದರು. ರಾಷ್ಟ್ರೀಯ ವಕ್ತಾರ ಸುಧಾಕರ್ ಶೆಟ್ಟಿ ಶೃಂಗೇರಿ ಶಾಸಕ ಸುಧಾಕರ್ ಶೆಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ರು ಬಡವರು, ಅಂಗವಿಕಲರು, ವಿಧವೆಯರು ಹಾಗೂ ವೃದ್ಧರ ಪರವಾಗಿ ಧ್ವನಿ ಎತ್ತುವ ಬದಲು ಅವರು ಮೌನವಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ರು. 32 ಸಾವಿರ ರೂಪಾಯಿ ಆದಾಯ ಮಿತಿ ದಾಟಿದೆ ಎಂಬ ಕಾರಣಕ್ಕೆ ಬಡವರಿಗೆ ನೀಡಲಾಗುತ್ತಿರುವ ಮಾಸಾಶನ ಹಾಗೂ ಸೌಲಭ್ಯಗಳನ್ನು ತಡೆಯಲು ಪ್ರಮಾಣಪತ್ರ ಕೇಳಲಾಗುತ್ತಿದೆ ಎಂದು ಆರೋಪಿಸಿದ ಅವರು, ಸರ್ಕಾರ ಬಡವರ ಮರಣ ಶಾಸನ ಬರೆಯಲು ಹೊರಟಿದೆ ಎಂದು ಕಿಡಿಕಾರಿದ್ರು. ಸ್ಥಳೀಯ ಶಾಸಕರು ಸಚಿವರಾಗಲು ಅಥವಾ ಬೀದಿ ಹೋರಾಟ ಮಾಡಲು ಆಸಕ್ತಿ ತೋರುತ್ತಿದ್ದಾರೆಯೇ ಹೊರತು, ತಮ್ಮನ್ನು ನಂಬಿ ವೋಟ್ ಹಾಕಿದ ಬಡವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಸರ್ಕಾರ ತಕ್ಷಣವೇ ಈ ನಿಯಮಗಳನ್ನು ಬದಲಾಯಿಸದಿದ್ದರೆ ಉಗ್ರ ಪ್ರತಿಭಟನೆ ಹಾಗೂ ಜೈಲ್ ಭರೋ ಕಾರ್ಯಕ್ರಮ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


