ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪಕ್ಷದ ಕಟ್ಟಾಳು, ಸಂಘಟನಾ ಚತುರ ಎಂದೇ ಹೆಸರಾದ ಎಚ್.ಪಿ. ಮಂಜೇಗೌಡ ಅವರನ್ನು ಎಐಸಿಸಿ ಅಧಿಕೃತವಾಗಿ ಆಯ್ಕೆ ಮಾಡಿದೆ. ಕಳೆದ ಹಲವು ದಿನಗಳಿಂದ ಜಿಲ್ಲೆಯ ನಾಯಕತ್ವದ ಪಟ್ಟಕ್ಕಾಗಿ ಘಟಾನುಘಟಿಗಳು ಹಾಗೂ ಪ್ರಬಲ ಆಕಾಂಕ್ಷಿಗಳ ನಡುವೆ ತೀವ್ರ ತೆರೆಮರೆಯ ಕಸರತ್ತು ನಡೆದಿತ್ತು. ಈ ಎಲ್ಲಾ ಪೈಪೋಟಿಗಳಿಗೆ ತೆರೆ ಎಳೆದ ಹೈಕಮಾಂಡ್, ಅಂತಿಮವಾಗಿ ಮಂಜೇಗೌಡ ಅವರ ಹೆಗಲಿಗೆ ಜಿಲ್ಲೆಯ ಸಾರಥ್ಯವನ್ನು ಹೊರಿಸಿದ್ದು, ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ.
ಹಾಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ ಶ್ರಮ ಮತ್ತು ಅಚಲ ನಿಷ್ಠೆಗೆ ಸಂದ ಜಯ ಇದಾಗಿದ್ದು, ಮಂಜೇಗೌಡ ಅವರ ನೇಮಕದ ಆದೇಶ ಪ್ರಕಟವಾಗುತ್ತಿದ್ದಂತೆ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದೆ. ನೂತನ ಅಧ್ಯಕ್ಷರ ಬೆಂಬಲಿಗರು ಹಾಗೂ ಕಾರ್ಯಕರ್ತರು ನಗರದ ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಂಘಟನಾ ಚತುರನ ನೇತೃತ್ವದಲ್ಲಿ ಕಾಫಿನಾಡಿನಲ್ಲಿ ಕಾಂಗ್ರೆಸ್ ಮತ್ತಷ್ಟು ಬಲಿಷ್ಠವಾಗಿ ಹೊರಹೊಮ್ಮಲಿದೆ ಎಂಬ ವಿಶ್ವಾಸ ಸ್ಥಳೀಯ ಮುಖಂಡರ ವಲಯದಲ್ಲಿ ವ್ಯಕ್ತವಾಗಿದೆ.








