ಚಿಕ್ಕಮಗಳೂರು: ಕಾಫಿನಾಡಿನ ಜನದಟ್ಟಣೆಯ ರಸ್ತೆಯಲ್ಲಿ ಕಳೆದ ರಾತ್ರಿ ಕುಡುಕರ ಕಿಡಿಗೇಡಿತನ ಮಿತಿಮೀರಿದ್ದು, ಸರ್ಕಾರಿ ಬಸ್ಸನ್ನು ಅಡ್ಡಗಟ್ಟಿ ಚಾಲಕನೊಂದಿಗೆ ರೌಡಿಸಂ ಮಾಡಿರುವ ಘಟನೆ ನಡೆದಿದೆ.
ಕಡೂರಿನಿಂದ ಚಿಕ್ಕಮಗಳೂರು ನಗರಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸನ್ನು ಮಧ್ಯರಾತ್ರಿ ಸುಮಾರು 12 ಗಂಟೆಯ ವೇಳೆಗೆ ನಗರದ ಟೆಂಟರ್ ಚಿಕನ್ ಬಳಿ ಕಿಡಿಗೇಡಿಗಳು ತಡೆದಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಟೋ ಚಾಲಕರು, ರಸ್ತೆಯ ಮಧ್ಯದಲ್ಲೇ ತಮ್ಮ ಆಟೋವನ್ನು ನಿಲ್ಲಿಸಿ ಬಸ್ ಮುಂದೆ ಅಡ್ಡಾದಿಡ್ಡಿಯಾಗಿ ವರ್ತಿಸಿದ್ದಾರೆ.
ಸೆಲ್ಫಿ ಕ್ರೇಜ್: ಬಸ್ಸನ್ನು ಅಡ್ಡಗಟ್ಟಿದ್ದಲ್ಲದೆ, ಬಸ್ಸಿನ ಮುಂದೆ ನಿಂತು ಅಟ್ಟಹಾಸದಿಂದ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ದಾರಿ ಬಿಡುವಂತೆ ಬಸ್ ಚಾಲಕ ಎಷ್ಟು ಮನವಿ ಮಾಡಿದರೂ ಕೇಳದ ಕಿಡಿಗೇಡಿಗಳು, ಏಕವಚನದಲ್ಲಿ ಕೂಗಾಡುತ್ತಾ ರೌಡಿಸಂ ಪ್ರದರ್ಶಿಸಿದ್ದಾರೆ.
ಕುಡುಕರ ಈ ಎಲ್ಲಾ ಕೃತ್ಯಗಳನ್ನು ಬಸ್ಸಿನಲ್ಲಿದ್ದ ಪ್ರಯಾಣಿಕರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಸೆರೆಹಿಡಿದಿದ್ದಾರೆ.
”ಮಧ್ಯರಾತ್ರಿ ಹೊತ್ತಿನಲ್ಲಿ ಸಾರ್ವಜನಿಕ ಸಾರಿಗೆಗೆ ಅಡ್ಡಿಪಡಿಸಿ, ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸುವ ಇಂತಹ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಘಟನೆಯು ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಧ್ಯರಾತ್ರಿಯಲ್ಲಿ ಅರಾಜಕತೆ ಸೃಷ್ಟಿಸುವ ಇಂತಹ ವ್ಯಕ್ತಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಬೇಕಿದೆ.














Leave a Reply