ಚಿಕ್ಕಮಗಳೂರಿನಲ್ಲಿ ತಡರಾತ್ರಿ ಬಿರುಗಾಳಿ ಸಹಿತ ಸುರಿದ ಭೀಕರ ಮಳೆಗೆ ಇಡೀ ಜಿಲ್ಲಾ ಕೇಂದ್ರ ತತ್ತರಿಸಿ ಹೋಗಿದೆ. ವರುಣನ ಅಬ್ಬರಕ್ಕೆ ನಗರದಾದ್ಯಂತ ನಾನಾ ರೀತಿಯ ಅವಾಂತರಗಳು ಸೃಷ್ಟಿಯಾಗಿದ್ದು, ಸಾರ್ವಜನಿಕರ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಭಾರೀ ಗಾಳಿಯ ರಭಸಕ್ಕೆ ನಗರದ ಪ್ರಮುಖ ರಸ್ತೆಗಳು ಹಾಗೂ ವಸತಿ ಪ್ರದೇಶಗಳಲ್ಲಿ ಸಾಲು ಸಾಲು ಬೃಹತ್ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಸಮವಾಗಿವೆ. ವಿಶೇಷವಾಗಿ ಹೊಸಮನೆ ಸರ್ಕಲ್ ಹಾಗೂ ಕೋರ್ಟ್ ಮುಂಭಾಗದಲ್ಲಿ ಹತ್ತಾರು ವಿದ್ಯುತ್ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದರೆ, ಕೋಟೆ ಬಡಾವಣೆಯಲ್ಲಿ ಹಳೆಯದಾದ ದೊಡ್ಡ ಮರಗಳು ಧರೆಗುರುಳಿವೆ. ಗಾಳಿಯ ತೀವ್ರತೆಗೆ ಕೆಲವು ಮನೆಗಳ ಮೇಲ್ಛಾವಣಿಯ ಹೆಂಚುಗಳು ಹಾರಿಹೋಗಿದ್ದು, ಐಬಿ ಮುಂಭಾಗದ ಕಾಂಪೌಂಡ್ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ನಗರದಾದ್ಯಂತ ವ್ಯಾಪಕವಾಗಿ ಮರ ಮತ್ತು ಕಂಬಗಳು ಮುರಿದು ಬಿದ್ದಿರುವ ಕಾರಣ ಚಿಕ್ಕಮಗಳೂರು ನಗರದ ಅರ್ಧಕ್ಕೂ ಹೆಚ್ಚು ಭಾಗದಲ್ಲಿ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದ್ದು, ಕತ್ತಲೆ ಆವರಿಸಿದೆ. ಪ್ರಸ್ತುತ ಮೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಸ್ತೆಗಳಿಗೆ ಅಡ್ಡಲಾಗಿ ಬಿದ್ದಿರುವ ಮರ ಹಾಗೂ ಕಂಬಗಳನ್ನು ಯುದ್ಧೋಪಾದಿಯಲ್ಲಿ ತೆರವುಗೊಳಿಸುತ್ತಿದ್ದಾರೆ. ಸದ್ಯ ನಗರದಲ್ಲಿ ಸಂಚಾರ ಸುಗಮಗೊಳಿಸಲು ಮತ್ತು ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲು ತೀವ್ರ ಕಾರ್ಯಾಚರಣೆ ಮುಂದುವರಿದಿದೆ.











Leave a Reply