मौसम क्रिकेट ऑपरेशन सिंदूर क्रिकेट स्पोर्ट्स बॉलीवुड जॉब - एजुकेशन बिजनेस लाइफस्टाइल देश विदेश राशिफल आध्यात्मिक अन्य
---Advertisement---

ಸಿ.ಟಿ. ರವಿ ನಿವಾಸದಲ್ಲಿ ಹೈಡ್ರಾಮಾ: ನೋಟಿಸ್ ಸ್ವೀಕರಿಸಲು ನಿರಾಕರಣೆ, ಪೊಲೀಸರ ವಿರುದ್ಧ ಬೆಂಬಲಿಗರ ಧಿಕ್ಕಾರ!

---Advertisement---


ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರ ಚಿಕ್ಕಮಗಳೂರಿನ ನಿವಾಸದಲ್ಲಿ ತೀವ್ರ ಹೈಡ್ರಾಮಾ ನಡೆದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಲು ಬಂದ ಪೊಲೀಸರ ನಡೆಯನ್ನು ಸಿ.ಟಿ. ರವಿ ಮತ್ತು ಅವರ ಬೆಂಬಲಿಗರು ತೀವ್ರವಾಗಿ ಖಂಡಿಸಿದ್ದಾರೆ. ನಗರ ಠಾಣಾ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಅವರು ನೋಟಿಸ್ ನೀಡಲು ಮನೆಗೆ ಆಗಮಿಸಿದಾಗ, ಅದನ್ನು ಸ್ವೀಕರಿಸಲು ಸ್ಪಷ್ಟವಾಗಿ ನಿರಾಕರಿಸಿದ ಸಿ.ಟಿ. ರವಿ, ಮೊದಲು ಎಫ್‌ಐಆರ್ ಪ್ರತಿಯನ್ನು ನೀಡುವಂತೆ ಪಟ್ಟು ಹಿಡಿದರು. “ನನ್ನ ಭಾಷಣದಲ್ಲಿ ಧರ್ಮ ಎಂಬ ಒಂದೇ ಒಂದು ಪದವಿದೆಯೇ? ‘ಮುಲ್ಲಾ’ ಎಂದರೆ ಮುಸ್ಲಿಂ ಸಮುದಾಯ ಎಂದರ್ಥವೇ? ನಾನು ಮಾತನಾಡಿದ್ದು ಬೆಂಕಿ ಹಾಕಲು ಬಂದವರ ಬಗ್ಗೆಯೇ ಹೊರತು ಯಾವುದೇ ಸಮುದಾಯದ ವಿರುದ್ಧವಲ್ಲ” ಎಂದು ಖಡಕ್ ಆಗಿ ಪ್ರಶ್ನಿಸಿದ ಅವರು, ಪೊಲೀಸರು ರಾಜಕಾರಣಿಗಳ ಕೈಗೊಂಬೆಯಾಗದಂತೆ ಎಚ್ಚರಿಕೆ ನೀಡಿದರು.
ದೂರು ಬಂದ ತಕ್ಷಣ ಪರಿಶೀಲಿಸದೆ ಕೇಸ್ ದಾಖಲಿಸುವ ಪೊಲೀಸರು, ತಾವು ಕಾಂಗ್ರೆಸ್ ನಾಯಕರ ವಿರುದ್ಧ ನೀಡಿದ ದೂರುಗಳ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹರಿಹಾಯ್ದರು. ಈ ವೇಳೆ ಸಿ.ಟಿ. ರವಿ ಅವರ ನಿವಾಸದಲ್ಲಿದ್ದ ವಕೀಲರು ಹಾಗೂ ಅಪಾರ ಸಂಖ್ಯೆಯ ಬಿಜೆಪಿ ಕಾರ್ಯಕರ್ತರು ಪೊಲೀಸರ ತಾರತಮ್ಯದ ವೈಖರಿಯನ್ನು ತೀವ್ರವಾಗಿ ಖಂಡಿಸಿ, ಅವರ ವಿರುದ್ಧವೇ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಹಾಗೂ ಸಿ.ಟಿ. ರವಿ ನೋಟಿಸ್ ಪಡೆಯಲು ಒಪ್ಪದ ಕಾರಣ, ತನಿಖಾಧಿಕಾರಿ ಇನ್ಸ್‌ಪೆಕ್ಟರ್ ಅಭಯ್ ಪ್ರಕಾಶ್ ಅವರು ಸ್ಥಳದಿಂದ ವಾಪಸ್ ತೆರಳಿದರು. ಇನ್ಸ್‌ಪೆಕ್ಟರ್ ಹೊರಗೆ ಹೋಗುವವರೆಗೂ ಕಾರ್ಯಕರ್ತರು ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Join WhatsApp

Join Now

Join Telegram

Join Now

Leave a Comment