ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದ್ದು, ಗುಡುಗು ಹಾಗೂ ಸಿಡಿಲಿನ ಆರ್ಭಟಕ್ಕೆ ದಂಪತಿ ಗಾಯಗೊಂಡಿರುವ ಆತಂಕಕಾರಿ ಘಟನೆ ನರಸಿಂಹರಾಜಪುರ ತಾಲೂಕಿನ ಸೀಗುವಾನಿ ಗ್ರಾಮದಲ್ಲಿ ಸಂಭವಿಸಿದೆ. ಮಂಜುನಾಥ ಮತ್ತು ಮಮತಾ ಎಂಬ ದಂಪತಿ ಎನ್.ಆರ್.ಪುರ ಪಟ್ಟಣದಿಂದ ತಮ್ಮ ಕೆಲಸ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಹಠಾತ್ ಆಗಿ ಜೋರಾದ ಮಳೆ ಸುರಿಯಲಾರಂಭಿಸಿದೆ. ಮಳೆಯಿಂದ ರಕ್ಷಣೆ ಪಡೆಯುವ ಸಲುವಾಗಿ ಅವರು ದಾರಿಯಲ್ಲಿದ್ದ ಸೀಗುವಾನಿ ಗ್ರಾಮದ ಬಸ್ ತಂಗುದಾಣದಲ್ಲಿ ಆಶ್ರಯ ಪಡೆದು ನಿಂತಿದ್ದರು.
ದಂಪತಿಗಳು ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭದಲ್ಲಿಯೇ ಅದರ ಪಕ್ಕದಲ್ಲಿ ಭೀಕರವಾಗಿ ಸಿಡಿಲು ಅಪ್ಪಳಿಸಿದೆ. ಅದೃಷ್ಟವಶಾತ್ ಸಿಡಿಲು ನೇರವಾಗಿ ದಂಪತಿಗಳ ಮೇಲೆ ಬಡಿಯದ ಕಾರಣ ಅವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಸಿಡಿಲು ಅಪ್ಪಳಿಸಿದ ಭೀಕರ ತೀವ್ರತೆಗೆ ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಘಟನೆ ನಡೆದ ತಕ್ಷಣವೇ ಸ್ಥಳೀಯರ ನೆರವಿನೊಂದಿಗೆ ಗಾಯಾಳುಗಳನ್ನು ಎನ್.ಆರ್.ಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆ ಹಾಗೂ ತಪಾಸಣೆಗಾಗಿ ದಂಪತಿಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದೆ.












Leave a Reply