ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರಿ ವಾಹನಗಳಿಗೆ ಬ್ರೇಕ್: ಸೆಪ್ಟೆಂಬರ್ 30ರವರೆಗೆ ತನಿಕೋಡ್ – ಎಸ್.ಕೆ. ಬಾರ್ಡರ್ ಸಂಚಾರ ನಿಷೇಧ*

Spread the love

 

 

ಚಿಕ್ಕಮಗಳೂರು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡ್‌ನಿಂದ ಎಸ್.ಕೆ. ಬಾರ್ಡರ್‌ವರೆಗಿನ ಮಾರ್ಗದಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ ಸೆಪ್ಟೆಂಬರ್ 30, 2026ರವರೆಗೆ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ಅಧಿಕೃತ ಆದೇಶ ಹೊರಡಿಸಿದ್ದು, ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ರಸ್ತೆ ವಲಯದಲ್ಲಿರುವ ನಾಲ್ಕು ಕಿರು ಸೇತುವೆಗಳು ತೀರಾ ಶಿಥಿಲಾವಸ್ಥೆಯಲ್ಲಿದ್ದು, 12 ಟನ್‌ಗಿಂತ ಹೆಚ್ಚು ತೂಕದ ಟಿಪ್ಪರ್, ಲಾರಿ ಮತ್ತು ಕಟ್ಟಡ ಸಾಮಗ್ರಿ ಹೊತ್ತ ವಾಹನಗಳ ಓಡಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಈ ಅಪಾಯಕಾರಿ ಸ್ಥಿತಿ ಬೆಳಕಿಗೆ ಬಂದಿದೆ. ಇಲ್ಲಿನ ಕಿರು ಸೇತುವೆಗಳನ್ನು 1950ರಿಂದ 1960ರ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಸದ್ಯ ಇವುಗಳ ಕಲ್ಲುಗಳು ಕಿತ್ತುಬಂದಿವೆ. ಕಂಬಗಳು ಭಾಗಶಃ ಹಾನಿಗೊಳಗಾಗಿದ್ದು, ಸ್ಲಾಬ್‌ನ ಕಾಂಕ್ರೀಟ್ ಬಿದ್ದು ಕಬ್ಬಿಣದ ಸರಳುಗಳು ಹೊರಗೆ ಕಾಣಿಸುತ್ತಿವೆ. ಪ್ರಸ್ತುತ ಮಳೆಗಾಲ ಆರಂಭವಾಗುತ್ತಿರುವುದರಿಂದ ಹಳ್ಳಗಳಲ್ಲಿ ನೀರಿನ ಹರಿವು ಹೆಚ್ಚಾಗಿ ಸೇತುವೆಗಳು ಕುಸಿಯುವ ಭೀತಿ ಎದುರಾಗಿದೆ. ಇದರೊಂದಿಗೆ, ಈ ರಸ್ತೆಯು ತೀವ್ರ ತಿರುವುಗಳು ಹಾಗೂ ಕಡಿದಾದ ಏರಿಗಳನ್ನು ಹೊಂದಿರುವ ಏಕಪಥ ರಸ್ತೆಯಾಗಿದ್ದು, ಮಳೆಯಿಂದಾಗಿ ಇಕ್ಕೆಲಗಳ ಮಣ್ಣು ಕೊಚ್ಚಿಹೋಗಿ ಭಾರಿ ವಾಹನಗಳು ಸಿಲುಕಿಕೊಳ್ಳುವ ಮತ್ತು ಅಪಘಾತಗಳು ಸಂಭವಿಸುವ ಗಂಭೀರ ಆತಂಕ ಎದುರಾಗಿದೆ.

ಈ ಹಿನ್ನೆಲೆಯಲ್ಲಿ ವಾಹನ ಸವಾರರ ಅನುಕೂಲಕ್ಕಾಗಿ ಜಿಲ್ಲಾಡಳಿತವು ಬದಲಿ ಮಾರ್ಗಗಳನ್ನು ಪ್ರಕಟಿಸಿದೆ. ಚಿಕ್ಕಮಗಳೂರು ಮತ್ತು ನರಸಿಂಹರಾಜಪುರ ಕಡೆಯಿಂದ ಸಂಚರಿಸುವ ಭಾರಿ ವಾಹನಗಳು ಇನ್ನು ಮುಂದೆ ಬಾಳೆಹೊನ್ನೂರು, ಮಾಗುಂಡಿ, ಕಳಸ ಹಾಗೂ ಕುದುರೆಮುಖ ಮಾರ್ಗವಾಗಿ ಎಸ್.ಕೆ. ಬಾರ್ಡರ್ ತಲುಪಬೇಕಿದೆ. ಹಾಗೆಯೇ, ಕೊಪ್ಪ ಕಡೆಯಿಂದ ಬರುವ ಭಾರಿ ವಾಹನಗಳು ಕೊಪ್ಪ, ಜಯಪುರ, ಬಾಳೆಹೊನ್ನೂರು, ಮಾಗುಂಡಿ, ಕಳಸ ಮತ್ತು ಕುದುರೆಮುಖ ರಸ್ತೆಯ ಮೂಲಕ ಎಸ್.ಕೆ. ಬಾರ್ಡರ್ ಕಡೆಗೆ ಸಾಗಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ವಾಹನ ಸವಾರರು ಮತ್ತು ಸಾರ್ವಜನಿಕರು ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾಡಳಿತದೊಂದಿಗೆ ಸಹಕರಿಸಿ ಈ ಬದಲಿ ಮಾರ್ಗಗಳನ್ನು ಬಳಸುವಂತೆ ಕೋರಲಾಗಿದೆ.

Leave a Reply

Your email address will not be published. Required fields are marked *