ಬ್ಲಾಕ್ ಅಧ್ಯಕ್ಷರ ವಜಾ ಆದೇಶಕ್ಕೆ ಜಿಲ್ಲಾಧ್ಯಕ್ಷರ ಬ್ರೇಕ್: ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಮುಂದುವರಿದ ಹೈಡ್ರಾಮಾ!

Spread the love

ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಒಳಗೊಳಗೇ ಹೊಗೆಯಾಡುತ್ತಿದ್ದ ಅಸಮಾಧಾನದ ಕಿಚ್ಚು ಈಗ ಸಂಪೂರ್ಣವಾಗಿ ಬೀದಿಗೆ ಬಂದು ನಿಂತಿದ್ದು, ಕೈ ನಾಯಕರ ನಡುವಿನ ಶೀತಲ ಸಮರ ತುತ್ತತುದಿಗೆ ತಲುಪಿದೆ. ಕ್ಷೇತ್ರದಲ್ಲಿ ಶಾಸಕಿ ನಯನಾ ಮೋಟಮ್ಮ ಹಾಗೂ ಹಿರಿಯ ಕೈ ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನ ರಾಜಕೀಯ ಮೇಲಾಟ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪಕ್ಷದ ಆಂತರಿಕ ಭಿನ್ನಮತ ತೀವ್ರ ಸ್ವರೂಪ ಪಡೆದುಕೊಂಡಿದೆ.

ಈ ಆಂತರಿಕ ಕಲಹದ ಮುಂದುವರಿದ ಭಾಗವಾಗಿ ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಅವರು ಜಿಲ್ಲಾ ಸಮಿತಿಯ ಗಮನಕ್ಕೆ ತರದೆ ಹೋಬಳಿ ಅಧ್ಯಕ್ಷ ಶಂಕರ್ ಅವರನ್ನು ಏಕಪಕ್ಷೀಯವಾಗಿ ಹುದ್ದೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಈ ದಿಢೀರ್ ನಡೆ ಪಕ್ಷದ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿತ್ತು. ಆದರೆ ಈ ಬೆಳವಣಿಗೆಯಿಂದ ತಕ್ಷಣವೇ ಎಚ್ಚೆತ್ತುಕೊಂಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್ ಅವರು ಕಾರ್ಯಪ್ರವೃತ್ತರಾಗಿ, ಬ್ಲಾಕ್ ಅಧ್ಯಕ್ಷರ ವಜಾ ಆದೇಶಕ್ಕೆ ತಡೆ ನೀಡಿದ್ದಾರೆ. ಜಿಲ್ಲಾ ಸಮಿತಿಯ ಅನುಮತಿ ಇಲ್ಲದೆ ಕೈಗೊಂಡಿರುವ ಈ ಶಿಸ್ತು ಕ್ರಮ ಸಿಂಧುವಲ್ಲ ಎಂದು ಸ್ಪಷ್ಟಪಡಿಸಿರುವ ಜಿಲ್ಲಾಧ್ಯಕ್ಷರು, ಆದೇಶವನ್ನು ತಡೆಹಿಡಿಯುವ ಮೂಲಕ ಸದ್ಯಕ್ಕೆ ಬಣ ರಾಜಕೀಯಕ್ಕೆ ಬ್ರೇಕ್ ಹಾಕಲು ಯತ್ನಿಸಿದ್ದಾರೆ.

ಕಳೆದ 15 ದಿನಗಳಿಂದ ಮೂಡಿಗೆರೆ ಕಾಂಗ್ರೆಸ್‌ನಲ್ಲಿ ಭಿನ್ನಮತದ ಕಿಚ್ಚು ಜೋರಾಗಿ ಉರಿಯುತ್ತಲೇ ಇದ್ದು, ಹಿರಿಯ ಮತ್ತು ಕಿರಿಯ ಕಾರ್ಯಕರ್ತರ ನಡುವೆ ಬಹಿರಂಗ ಪತ್ರಸಮರವೇ ಆರಂಭವಾಗಿದೆ. ಶಾಸಕಿ ನಯನಾ ಮೋಟಮ್ಮ ಅವರ ನಡವಳಿಕೆಗಳ ವಿರುದ್ಧ ಅಸಮಾಧಾನಗೊಂಡಿರುವ ಹಿರಿಯ ಕಾಂಗ್ರೆಸ್ ಕಾರ್ಯಕರ್ತರು, ಬಂಡಾಯದ ಬಾವುಟ ಹಾರಿಸಿ 16 ಪ್ರಮುಖ ಅಂಶಗಳನ್ನು ಒಳಗೊಂಡ ಸುದೀರ್ಘ ದೂರನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕಿಯ ಬೆಂಬಲಕ್ಕೆ ನಿಂತಿರುವ ಕಿರಿಯ ಕಾರ್ಯಕರ್ತರ ದಂಡು, ಶಾಸಕಿ ಪರವಾಗಿ 13 ಅಂಶಗಳ ಮನವಿಯನ್ನು ಸಿದ್ಧಪಡಿಸಿ ಕೆಪಿಸಿಸಿಗೆ ಕಳುಹಿಸುವ ಮೂಲಕ ಹಿರಿಯರಿಗೆ ನೇರ ತಿರುಗೇಟು ನೀಡಿದೆ. ಹಿರಿಯರು ಮತ್ತು ಕಿರಿಯರ ನಡುವಿನ ಈ ಪೈಪೋಟಿ ಹಾಗೂ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿರುವ ಮೂಡಿಗೆರೆ ಕಾಂಗ್ರೆಸ್‌ನ ಈ ಆಂತರಿಕ ಜಗಳ ಸದ್ಯಕ್ಕಂತೂ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

Leave a Reply

Your email address will not be published. Required fields are marked *