ಮೂಡಿಗೆರೆ ಬಳಿ ರಸ್ತೆಗೆ ಉರುಳಿದ ಬೃಹತ್ ಮರ; ಹಲವು ಹಳ್ಳಿಗಳ ಸಂಪರ್ಕ ಕಡಿತ, ಸಾರ್ವಜನಿಕರ ಪರದಾಟ

Spread the love

 

​ಚಿಕ್ಕಮಗಳೂರು: ಕಾಫಿನಾಡ ಮಲೆನಾಡು ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯ ಅಬ್ಬರ ಜೋರಾಗಿದ್ದು, ಭಾರಿ ಗಾಳಿಗೆ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಬಕ್ಕಿ ಗ್ರಾಮದ ಬಳಿ ಸಂಭವಿಸಿದೆ.

​ಮೂಡಿಗೆರೆಯಿಂದ ಗೌಡಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲೇ ಈ ದುರ್ಘಟನೆ ನಡೆದಿದ್ದು, ಮರ ಬಿದ್ದ ಪರಿಣಾಮ ಈ ಮಾರ್ಗದ ಹಲವು ಗ್ರಾಮಗಳ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಮಲೆನಾಡಿನಾದ್ಯಂತ ಸದ್ಯ ಸಾಧಾರಣ ಮಳೆಯಾಗುತ್ತಿದ್ದರೂ, ವಿಪರೀತ ಗಾಳಿ ಬೀಸುತ್ತಿರುವುದರಿಂದ ಈ ಅವಾಂತರ ಸೃಷ್ಟಿಯಾಗಿದೆ.

​ಕೂಲಿ ಕಾರ್ಮಿಕರು, ಸ್ಥಳೀಯರ ಪರದಾಟ

​ಮುಖ್ಯ ರಸ್ತೆಯಲ್ಲೇ ಮರ ಬಿದ್ದಿರುವುದರಿಂದ ಪ್ರತಿನಿತ್ಯ ತೋಟಗಳಿಗೆ ಹಾಗೂ ಇತರೆ ಕೂಲಿ ಕೆಲಸಗಳಿಗೆ ತೆರಳುವ ಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಮರ ತೆರವುಗೊಳಿಸುವ ಕಾರ್ಯಾಚರಣೆ ತಡವಾಗುತ್ತಿರುವುದರಿಂದ ಸ್ಥಳೀಯರು ಹಾಗೂ ಪ್ರಯಾಣಿಕರು ರಸ್ತೆಯಲ್ಲೇ ಕಾದು ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.

​ಪರ್ಯಾಯ ಮಾರ್ಗ ಬಳಸಲು ಮನವಿ

​ಮರ ತೆರವುಗೊಳಿಸುವ ಕಾರ್ಯ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಹಾಗೂ ವಾಹನ ಸವಾರರು ಈ ಮಾರ್ಗದ ಬದಲಾಗಿ ಬೆಟ್ಟಗೆರೆ – ಹ್ಯಾರಗುಡ್ಡೆ ಮಾರ್ಗವಾಗಿ ಸಂಚರಿಸುವಂತೆ ಸ್ಥಳೀಯ ಆಡಳಿತ ಹಾಗೂ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಜಿಲ್ಲೆಯ ಮಲೆನಾಡು ಭಾಗದಾದ್ಯಂತ ಗಾಳಿ-ಮಳೆಯಿಂದಾಗಿ ಅಲ್ಲಲ್ಲಿ ಇಂತಹ ನಾನಾ ಅವಾಂತರಗಳು ವರದಿಯಾಗುತ್ತಿವೆ.

Leave a Reply

Your email address will not be published. Required fields are marked *