ಚಿಕ್ಕಮಗಳೂರು: ನಗರಸಭೆಯ ನೂತನ ಸಾರಥಿಯಾಗಿ ವಾರ್ಡ್ ಸಂಖ್ಯೆ 32ರ ಸದಸ್ಯೆ ಭವ್ಯ ಮಂಜುನಾಥ್ ಅವರು ಆಯ್ಕೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇಂದು ನಡೆಯುತ್ತಿರುವ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯು ತೀವ್ರ ಕುತೂಹಲ ಕೆರಳಿಸಿತ್ತಾದರೂ, ಕೊನೆ ಕ್ಷಣದಲ್ಲಿ ರಾಜಕೀಯ ಚಿತ್ರಣವೇ ಬದಲಾಗಿದೆ. ಅಧ್ಯಕ್ಷ ಗಾದಿಗಾಗಿ ಬಿಜೆಪಿಯಲ್ಲಿ ಭಾರಿ ಪೈಪೋಟಿ ಏರ್ಪಟ್ಟಿತ್ತು. ಕವಿತಾ ಶೇಖರ್, ರೂಪ ಕುಮಾರ್, ಉಮಾದೇವಿ ಕೃಷ್ಣಪ್ಪ ಮತ್ತು ದೀಪಾ ರವಿ ಕುಮಾರ್ ಈ ನಾಲ್ವರೂ ತಮಗೇ ಅಧ್ಯಕ್ಷ ಪಟ್ಟ ಬೇಕು ಎಂದು ಪಟ್ಟು ಹಿಡಿದಿದ್ದರು. ಆಕಾಂಕ್ಷಿಗಳ ನಡುವೆ ಒಮ್ಮತ ಮೂಡಿಸಲು ನಡೆಸಿದ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ, ಪಕ್ಷದ ನಾಯಕರು ಅಂತಿಮವಾಗಿ ಭವ್ಯ ಮಂಜುನಾಥ್ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮತ್ತೊಂದೆಡೆ ವಿರೋಧ ಪಕ್ಷವಾದ ಕಾಂಗ್ರೆಸ್ನಿಂದ ಇದುವರೆಗೂ ಯಾವುದೇ ನಾಮಪತ್ರ ಸಲ್ಲಿಕೆಯಾಗದೆ ಇರುವುದು ಭವ್ಯ ಮಂಜುನಾಥ್ ಅವರ ಹಾದಿಯನ್ನು ಸುಲಭಗೊಳಿಸಿದೆ. ನಾಲ್ಕು ಜನರ ನಡುವಿನ ತೀವ್ರ ಪೈಪೋಟಿ ಮತ್ತು ಜಟಾಪಟಿಯ ಲಾಭ ಕೊನೆಗೆ ಐದನೇ ವ್ಯಕ್ತಿಗೆ ಒಲಿದಂತಾಗಿದ್ದು ಮಧ್ಯಾಹ್ನದ ವೇಳೆಗೆ ನೂತನ ನಗರಸಭೆ ಅಧ್ಯಕ್ಷರು ಯಾರು ಎಂಬುದು ಬಹಿರಂಗವಾಗಲಿದೆ.











Leave a Reply