ಚಿಕ್ಕಮಗಳೂರು: ಪತ್ನಿಯೊಂದಿಗೆ ಅಂಗಡಿ ಮುಂದೆ ಕುಳಿತು ಮಾತನಾಡುತ್ತಿದ್ದ ಪತಿ ಮೇಲೆ ಆರು ಜನ ಯುವಕರ ಗುಂಪೊಂದು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಕಲ್ಯಾಣ ನಗರದಲ್ಲಿ ನಡೆದಿದೆ.
ಜಗದಾಂಭ ಗ್ಲಾಸ್ ಅಂಡ್ ಪ್ಲೈವುಡ್ ಅಂಗಡಿ ನಡೆಸುತ್ತಿದ್ದ ಭನರಾಮ್, ಅಂಗಡಿ ಬಂದ್ ಮಾಡಿ ಪತ್ನಿಯೊಂದಿಗೆ ಮಾತನಾಡುತ್ತಾ ಅಂಗಡಿ ಮುಂದೆ ಕುಳಿತಿದ್ದರು. ಈ ವೇಳೆ ರಸ್ತೆಯಲ್ಲಿ ಬಂದ ಯುವಕರು, “ಮಹಿಳೆಯೊಂದಿಗೆ ಏಕೆ ಕುಳಿತಿದ್ದೀಯಾ?” ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಭನರಾಮ್, “ನನ್ನ ಹೆಂಡತಿಯೊಂದಿಗೆ ಮಾತನಾಡುತ್ತಿದ್ದೇನೆ” ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಯಾವುದೇ ಕಾರಣವಿಲ್ಲದೆ ಭನರಾಮ್ ಮೇಲೆ ಯುವಕರ ಗುಂಪು ಏಕಾಏಕಿ ಹಲ್ಲೆ ನಡೆಸಿದೆ. ಹಲ್ಲೆ ಬಿಡಿಸಲು ಬಂದ ಭನರಾಮ್ ಅವರ ಸಹೋದರ ಗುಣರಾಮ್ ಮೇಲೂ ಹಲ್ಲೆ ನಡೆಸಲಾಗಿದೆ.
ಅಂಗಡಿಯ ಪಕ್ಕದಲ್ಲೇ ಭನರಾಮ್ ಅವರ ಮನೆ ಇದ್ದು, ಇಡೀ ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ಆರೋಪದಡಿ ಚೇತನ್, ಸುಹಾಸ್ ಹಾಗೂ ಜೀಶಾಂತ್ ಸೇರಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ


