ಚಿಕ್ಕಮಗಳೂರು: ಕಾಫಿನಾಡಿನ ಬಯಲುಸೀಮೆ ಪ್ರದೇಶದಲ್ಲಿ ಕೃಷಿ ಬಿಕ್ಕಟ್ಟು ಹಾಗೂ ಸಾಲದ ಹೊರೆ ತೀವ್ರಗೊಳ್ಳುತ್ತಿರುವುದಕ್ಕೆ ಮತ್ತೊಂದು ಜೀವಬಲಿಯಾಗಿದೆ. ಬೆಳೆ ನಷ್ಟ ಮತ್ತು ಸಾಲ ತೀರಿಸಲಾಗದ ಮನನೊಂದು 38 ವರ್ಷದ ಯುವ ರೈತರೊಬ್ಬರು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಮಾಕನಹಳ್ಳಿ ಗ್ರಾಮದ ನಿವಾಸಿ ಸುನೀಲ್ (38) ಮೃತ ದುರ್ದೈವಿ. ಅಜ್ಜಂಪುರ ತಾಲೂಕಿನ ಹುಣಸಘಟ್ಟ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.

10 ಲಕ್ಷ ರೂಪಾಯಿ ಸಾಲದ ಸುಳಿಗೆ ಸಿಲುಕಿದ ರೈತ
ಮೃತ ಸುನೀಲ್ ಅವರು ತಮ್ಮ ತೋಟದಲ್ಲಿ ಅಡಿಕೆ ಬೆಳೆಸುವುದಕ್ಕಾಗಿ ವಿವಿಧ ಬ್ಯಾಂಕ್ಗಳು ಹಾಗೂ ಖಾಸಗಿ ಫೈನಾನ್ಸ್ಗಳಿಂದ ಒಟ್ಟು 10 ಲಕ್ಷ ರೂಪಾಯಿಗೂ ಅಧಿಕ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಆದರೆ ಈ ಬಾರಿ ಮಳೆ ಸರಿಯಾಗಿ ಕೈಕೊಟ್ಟ ಹಿನ್ನೆಲೆಯಲ್ಲಿ ಅಡಿಕೆ ತೋಟವನ್ನು ಒಣಗಿಹೋಗದಂತೆ ಕಾಪಾಡಿಕೊಳ್ಳಲು ಅವರು ಹಗಲಿರುಳು ಪರದಾಡಿದ್ದರು.
ಮಳೆಯಿಲ್ಲದೆ ಬೆಳೆ ಸಂಪೂರ್ಣವಾಗಿ ವಿಫಲಗೊಂಡಿದ್ದರಿಂದ ಕೈಯಲ್ಲಿ ಯಾವುದೇ ಆದಾಯವಿಲ್ಲದೆ, ಮಾಡಿದ ಸಾಲವನ್ನು ಹೇಗೆ ತೀರಿಸುವು ಎಂಬ ತೀವ್ರ ಮಾನಸಿಕ ನೊಂದಿಗೆ ಅವರು ಒಳಗಾಗಿದ್ದರು ಎನ್ನಲಾಗಿದೆ.
ನಾಲೆಗೆ ಹಾರಿ ಪ್ರಾಣ ಬಿಟ್ಟ ಸುನೀಲ್
ಸಾಲದ ಹೊರೆ ಹಾಗೂ ತೋಟದ ಚಿಂತೆಯಿಂದ ನೊಂದ ಸುನೀಲ್, ಹುಣಸಘಟ್ಟ ಗ್ರಾಮದ ಬಳಿ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಲುವೆಗೆ ಹಾರಿದ ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ತಕ್ಷಣವೇ ಎಚ್ಚೆತ್ತುಕೊಂಡು ಅವರನ್ನು ರಕ್ಷಿಸಿ, ಹೆಚ್ಚಿನ ಚಿಕಿತ್ಸೆಗಾಗಿ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ನಡೆಸಿದ ಚಿಕಿತ್ಸೆ ಫಲಕಾರಿಯಾಗದೆ 38 ವರ್ಷದ ಯುವ ರೈತ ಸುನೀಲ್ ಕೊನೆಯುಸಿರೆಳೆದಿದ್ದಾರೆ.
ಈ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

